ಮಂಗಳೂರು: ಶಾಂತಿ, ಸೌಹಾರ್ದಕ್ಕೆ ಹೆಸರಾದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾಣದ ಕೈಗಳು ದೇಶಪ್ರೇಮದ ಹೆಸರಿನಲ್ಲಿ ಜಿಲ್ಲೆಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್ ಆರೋಪಿಸಿದರು.
ರವಿವಾರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದ.ಕ. ಜಿಲ್ಲೆ ರಾಣಿ ಅಬಕ್ಕನಂತಹ ಸ್ವಾತಂತ್ರ್ಯ ಹೋರಾಟಗಾರರು ಹುಟ್ಟಿದ ನಾಡು. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಂಗಳೂರಿಗೆ ಉತ್ತಮ ಹೆಸರಿದೆ. ಆದರೆ ಪ್ರಸ್ತುತ ಜಿಲ್ಲೆಯಲ್ಲಿ ಕೋಮುದ್ವೇಷ ಹೆಚ್ಚಾಗುತ್ತಿದೆ. ಹೆಣ್ಣು ಮಗಳೊಬ್ಬಳು ಮಂಗಳೂರಿಗೆ ಬರುವಾಗ ಆಕೆಗೆ ಮೊಟ್ಟೆ ಎಸೆಯುತ್ತಾರೆ ಎಂದಾದರೆ ಇಲ್ಲಿನ ಸ್ಥಿತಿ ಯಾವ ಮಟ್ಟಕ್ಕೆ ತಲುಪಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು ಎಂದರು.
ಪ್ರಸ್ತುತ ಕಾಣದ ಕೈಗಳು ರಾಜಕೀಯ ಲಾಭಕ್ಕಾಗಿ ಜಾತಿ, ಧರ್ಮದ ಹೆಸರಿನಲ್ಲಿ ಸಂಘರ್ಷ ಸೃಷ್ಟಿಸುತ್ತಿವೆ. ಕರಿಟೋಪಿ, ಖಾಕಿ ಧರಿಸಿಕೊಂಡು ರಣಹೇಡಿಗಳಂತೆ ವರ್ತಿಸುತ್ತಿದ್ದಾರೆ. ಸ್ವಾತಂತ್ರ್ಯದ ಸಂದರ್ಭದಲ್ಲಿ ಬ್ರಿಟಿಷರ ಜತೆ ಸೇರಿ ಪಿತೂರಿ ನಡೆಸುತ್ತಿದ್ದ ಇವರು ಪ್ರಸ್ತುತ ಕಾಂಗ್ರೆಸ್‌ಗೆ ರಾಷ್ಟ್ರಪ್ರೇಮದ ಪಾಠ ಕಲಿಸುತ್ತಿದ್ದಾರೆ ಎಂದು ಹರಿಪ್ರಸಾದ್ ಕಟುವಾಗಿ ಟೀಕಿಸಿದರು.
ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಇಂದಿರಾ ಗಾಂಧಿ, ರಾಜೀವ್ ಗಾಂಧಿಯಂತಹ ನಾಯಕರು ಕಾಂಗ್ರೆಸ್ ಪಕ್ಷದಲ್ಲಿದ್ದರು. 70 ವರ್ಷ ರಾಷ್ಟ್ರವನ್ನಾಳಿದ ಕಾಂಗ್ರೆಸ್ ಏನೂ ಮಾಡಿಲ್ಲ. ನಾನು ಎರಡೇ ವರ್ಷಗಳಲ್ಲಿ ಅಭಿವೃದ್ಧಿ ಮಾಡಿದ್ದೇನೆ ಎಂದು ಮೋದಿಯವರು ಹೇಳುತ್ತಾರೆ. ಆದರೆ ಕಾಂಗ್ರೆಸ್ ದೇಶವನ್ನು ಇಬ್ಭಾಗ ಮಾಡುವ ಕೆಲಸ ಮಾಡಿಲ್ಲ. ಕಾಂಗ್ರೆಸ್ ದೇಶಕ್ಕಾಗಿ ಏನು ಮಾಡಿದೆ ಎಂಬುದು ಜನರಿಗೆ ಗೊತ್ತಿದೆ ಎಂದರು.
ಪಾಕಿಸ್ಥಾನದ ಮೇಲೆ ಅಭಿಮಾನವಿರುವವರು ಅಲ್ಲಿಗೇ ಹೋಗಲಿ ಎಂದು ಬಿಜೆಪಿಯ ಸಂಸದ ಪ್ರಹ್ಲಾದ ಜೋಶಿ ಹಾಗೂ ಶಾಸಕರೊಬ್ಬರು ಹೇಳುತ್ತಾರೆ. ಅವರು ಈ ಮಾತನ್ನು ಕೆಲವು ವರ್ಷಗಳ ಹಿಂದೆ ಪಾಕಿಗೆ ತೆರಳಿ ಜಿನ್ನಾ ಅವರ ಸಮಾಧಿಗೆ ಅಡ್ಡ ಬಿದ್ದ ಆಡ್ವಾಣಿ ಅವರಿಗೆ ಹೇಳಲಿ. ಆಹ್ವಾನವಿಲ್ಲದೆ ಪಾಕಿಸ್ಥಾನಕ್ಕೆ ತೆರಳಿ ಆತಿಥ್ಯ ಪಡೆದ ಮೋದಿ ಅವರಿಗೆ ಹೇಳಲಿ ಎಂದರು.
ಪ್ರಸ್ತುತ ನಕಲಿ ಗೋರಕ್ಷಕರಿಂದ ಜಿಲ್ಲೆಯಲ್ಲಿ ಭೀತಿ ಹುಟ್ಟಿದೆ. ಅವರು ರಾತ್ರಿ ಹೊತ್ತು ಡಕಾಯಿತರಾಗಿ, ಬೆಳಗ್ಗೆ ಗೋರಕ್ಷಕರಂತೆ ಪೋಸು ಕೊಡುತ್ತಿದ್ದಾರೆ. ಇವರು ಕೇವಲ ಪಾತ್ರಧಾರಿಗಳು ಮಾತ್ರ. ಇವರನ್ನು ನಿಯಂತ್ರಿಸುವ ಸೂತ್ರಧಾರಿಗಳು ಬೇರೆಯೇ ಇದ್ದಾರೆ. ಇವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ತಿಳಿಸಿದರು.
ಕಾವೇರಿ, ಮಹಾದಾಯಿ, ನೇತ್ರಾವತಿ ನದಿಯಂತಹ ನೈಸರ್ಗಿಕ ಸಂಪತ್ತಿನ ಕುರಿತು ಕಿತ್ತಾಡುವುದು ಸರಿಯಲ್ಲ. ಇಂತಹ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸಬೇಕು ಎಂದು ಹರಿಪ್ರಸಾದ್ ಸಲಹೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ, ಪ್ರಮುಖರಾದ ಎ.ಸಿ. ಭಂಡಾರಿ, ಪಿ.ವಿ. ಮೋಹನ್, ಕೆ.ಬಿ. ಬಲರಾಜ್ ರೈ, ಟಿ.ಕೆ. ಸುಧೀರ್, ವಿಶ್ವಾಸ್‌ದಾಸ್, ಬಾಲಕೃಷ್ಣ ಶೆಟ್ಟಿ, ಡಿ.ಡಿ. ಕಟ್ಟೆಮಾರ್, ಪದ್ಮನಾಭ ನರಿಂಗಾನ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English