ಮಂಜೇಶ್ವರ: ತಿರುವನಂತಪುರದಲ್ಲಿ ಬಿಜೆಪಿಯ ಕಾರ್ಯಾಲಯಕ್ಕೆ ಬಾಂಬೆಸೆದು ಹಾನಿಗೊಳಿಸಿದ ಘಟನೆಯನ್ನು ಪ್ರತಿಭಟಿಸಿ ಮಂಜೇಶ್ವರದಲ್ಲಿ ಬಿಜೆಪಿ ಕಾರ್ಯಕರ್ತರು ಮೆರವಣಿಗೆ ನಡೆಸಿದರು.
ಬಿಜೆಪಿಯ ರಾಜ್ಯ ಘಟಕ ಕಾರ್ಯಾಲಯಕ್ಕೆ ಬಾಂಬ್ ಎಸೆದು ಧ್ವಂಸಗೊಳಿಸಿ ಕೇರಳ ರಾಜ್ಯದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಿಣರಾಯಿ ವಿಜಯನ್ ನೇತೃತ್ವದ ಸರಕಾರದ ವಿರುದ್ಧ ಮಂಜೇಶ್ವರ ಹೊಸಂಗಡಿಯಲ್ಲಿ ಬಿಜೆಪಿ ಮಂಜೇಶ್ವರ ಪಂಚಾಯತ್ ಸಮಿತಿ ಪ್ರತಿಭಟನಾ ಮೆರವಣಿಗೆ ಹಾಗೂ ಖಂಡನಾ ಸಭೆ ಬುಧವಾರ ನಡೆಸಿತು.
ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಹರಿಶ್ಚಂದ್ರ ಮಂಜೇಶ್ವರ ಉದ್ಘಾಟಿಸಿ ಬಾಂಬ್ ಸಂಸ್ಕೃತಿಯನ್ನು ಪ್ರೋತ್ಸಾಹಿಸಿದರೆ ದೇಶದಾದ್ಯಂತ ಸಿಪಿಎಂ ಬಿಜೆಪಿಯ ಆಕ್ರೋಶವನ್ನು ಎದುರಿಸಬೇಕಾದೀತು. ಹಿಂದೆ ಕಣ್ಣೂರಿನ ಆಕ್ರಮಣಕ್ಕೆ ಎದುರಾಗಿ ದೆಹಲಿಯ ಸಿಪಿಎಂ ಕಚೇರಿ ಹಾಗೂ ಪ್ರಕಾಶ್ ಕಾರಾಟ್ ಅವರಿಗೆ ಆದ ಅನುಭವವನ್ನು ನೆನಪಿಸಿದರು. ಸಿಪಿಎಂ ಅಕ್ರಮ ರಾಜಕೀಯದಿಂದ ಹಿಂದೆ ಸರಿಯದಿದ್ದರೆ ದೇಶದಾದ್ಯಂತ ಕಮ್ಯೂನಿಸ್ಟರನ್ನು ಸದೆ ಬಡಿಯಬೇಕಾದೀತು ಎಂದು ಎಚ್ಚರಿಸಿದರು.
ಸಭೆಯಲ್ಲಿ ಬಿಜೆಪಿ ಪಂಚಾಯತ್ ಅಧ್ಯಕ್ಷ ತಾರಾನಾಥ್ ಅಧ್ಯಕ್ಷತೆ ವಹಿಸಿದರು. ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಕೆ.ವಿ. ಮಾತನಾಡಿದರು. ಒಬಿಸಿ ಮೋರ್ಚಾ ಮಂಡಲ ಅಧ್ಯಕ್ಷ ಚಂದ್ರಹಾಸ ಸುವರ್ಣ, ಜಿಲ್ಲಾ ಸಮಿತಿ ಸದಸ್ಯ ಯಾದವ ಬಡಾಜೆ, ಮಂಡಲ ಸಮಿತಿ ಸದಸ್ಯ ಪದ್ಮನಾಭ ಕಡಪ್ಪರ, ಯುವಮೋರ್ಚಾ ಕಾರ್ಯದರ್ಶಿ ಯಶಪಾಲ ಮೊದಲಾದವರು ಉಪಸ್ಥಿತರಿದ್ದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಅಡ್ಕ ಸ್ವಾಗತಿಸಿ, ಅವಿನಾಶ್ ವಂದಿಸಿದರು. ಭರತ್ ಹೊಸಂಗಡಿ, ವೀರ ಭಾಸ್ಕರ, ರಾಜೇಶ್ ಎನ್.ತೂಮಿನಾಡು, ರಾಜೇಶ್ ಶೆಟ್ಟಿ ಕುಂಜತ್ತೂರು ಮೊದಲಾದವರು ಮೆರವಣಿಗೆಗೆ ನೇತೃತ್ವ ನೀಡಿದರು.
Click this button or press Ctrl+G to toggle between Kannada and English