ಬೆಂಗಳೂರು: ಕರ್ನಾಟಕದ ಪಾಲಿಗೆ ಈ ತೀರ್ಪು ದೊಡ್ದ ನೋವುಂಟು ಮಾಡಿದೆ. ಇದೊಂದು ಮಾರಣಾಂತಿಕ ತೀರ್ಪು ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಬೇಸರ ವ್ಯಕ್ತಪಡಿಸಿದ್ದಾರೆ.
ಇಂದು ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ದೊಣ್ಣೆ ಕೊಟ್ಟು ಹೊಡೆಸಿಕೊಂಡಿದೆ. ಈ ಹಿಂದೆ ನೀಡಿದ ತೀರ್ಪಿನಲ್ಲಿ 15 ಸಾವಿರ ಕ್ಯೂಸೆಕ್ ನೀರು ಬಿಡಲು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಈಗ ಮತ್ತೊಂದು ಅಘಾತ ನೀಡಿದೆ. ಸರ್ಕಾರ ಪ್ರಾರಂಭದಲ್ಲಿ ತಪ್ಪು ಮಾಡಿದೆ. ಇದು ಎರಡನೇ ಮುಖಭಂಗ ಎಂದು ದೂರಿದರು.
ಸರ್ಕಾರದ ತಪ್ಪು ನಡವಳಿಕೆಗಳಿಂದ ಇಂತಹ ಗಲಾಟೆಗೆ ಆಸ್ಪದವಾಗಿದೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದು ಒತ್ತಾಯಿಸಿದರು. ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ಮಾಡುತ್ತಿರುವುದು ಸರಿಯಲ್ಲ. ತಮಿಳುನಾಡಿನಲ್ಲಿರುವ ಕನ್ನಡಿಗರಿಗೆ ರಕ್ಷಣೆ ನೀಡಬೇಕೆಂದು ಹೇಳಿದರು.
ಎರಡೂ ರಾಜ್ಯಗಳಲ್ಲಿರುವ ಭಾಷಾ ಅಲ್ಪಸಂಖ್ಯಾತರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಕೇಂದ್ರ ಗೃಹ ಸಚಿವರಿಗೆ ಮನವಿ ಮಾಡಿದರು. ಕನ್ನಡಿಗರು ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕು. ಸಾರ್ವಜನಿಕ ಆಸ್ತಿ-ಪಾಸ್ತಿಗೆ ಧಕ್ಕೆ ತರಬಾರದು ಎಂದು ಹೇಳಿದರು.
Click this button or press Ctrl+G to toggle between Kannada and English