ಮಂಗಳೂರು: ಕೂಡ್ಲಿಗಿ ಡಿವೈಎಸ್‌ಪಿ ಹುದ್ದೆಗೆ ನೀಡಿದ ರಾಜೀನಾಮೆ ಹಿಂಪಡೆಯುವುದಾಗಿ ಕೋರಿ ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿದೆ. ಆ. 29ಕ್ಕೆ ಪತ್ರ ಬರೆಯಲಾಗಿದ್ದರೂ ಪರಿಶೀಲಿಸಲಾಗುತ್ತಿದೆ ಎಂದಷ್ಟೇ ಉತ್ತರ ಬಂದಿದೆ ಎಂದು ಕೂಡ್ಲಿಗಿ ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ ತಿಳಿಸಿದ್ದಾರೆ.
ಯುವ ಬ್ರಿಗೇಡ್ ದ.ಕ. ಜಿಲ್ಲಾ ಘಟಕದ ವತಿಯಿಂದ ನಗರದ ಟಿ.ವಿ. ರಮಣ ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆದ “ಹೈದರಾಬಾದ್ ಸ್ವಾತಂತ್ರ್ಯ ಸಂಘರ್ಷ: ಹೈದರಾಬಾದ್ ಮುಕ್ತಿ ದಿವಸ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜೀನಾಮೆ ಹಿಂಪಡೆಯುವ ಕುರಿತು ಪತ್ರ ಬರೆದ ಅನಂತರ ಮುಖ್ಯಮಂತ್ರಿಯವರೇ ತನಗೆ ಖುದ್ದಾಗಿ ಕರೆ ಮಾಡಿದ್ದರು. “ಒಮ್ಮೆ ರಾಜೀನಾಮೆ ಕೊಡುವುದು; ಇನ್ನೊಮ್ಮೆ ಹಿಂಪಡೆಯುವುದು ಯಾಕೆ ಹೀಗೆ’ ಎಂದು ಪ್ರಶ್ನಿಸಿದ್ದರು. ಅವರಿಗೂ ಪರಿಸ್ಥಿತಿ ಮತ್ತು ಆಗಿನ ಮನಸ್ಥಿತಿ ಬಗ್ಗೆ ವಿವರಿಸಿದ್ದೆ. ಪತ್ರ ಪರಿಶೀಲನೆಯಲ್ಲಿದೆ ಎಂದಷ್ಟೇ ತಿಳಿಸಿದ್ದಾರೆ ಎಂದು ಅವರು ತಿಳಿಸಿದರು.
ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಸಂಬಂಧಪಟ್ಟ ಹಾಗೆ “ಬಿ’ ರಿಪೋರ್ಟ್ ಸಲ್ಲಿಕೆಯಾಗಿರುವ ಬಗ್ಗೆ ಮಾತನಾಡಿದ ಅವರು, ಗಣಪತಿ ಆತ್ಮಹತ್ಯೆ ಪ್ರಕರಣದ ಕುರಿತು ಜನತೆಗೆ ಗೊತ್ತಿದೆ. ಯಾವುದೇ ಪ್ರಕರಣದ ತನಿಖೆ ತನಿಖಾಧಿಕಾರಿ ಅವರ ಮೇಲೆ ಅವಲಂಬಿತವಾಗಿರುತ್ತದೆ ಎಂದರು.
ಕೆಲವೆಡೆ ಪೊಲೀಸರು ರಾಜಕಾರಣ ಮಾಡುತ್ತಾರೆ; ರಾಜಕಾರಣಿಗಳು ಪೊಲೀಸಿಂಗ್ ಮಾಡುತ್ತಾರೆ. ಯಾವುದೇ ಪ್ರಕರಣದ ತನಿಖೆಯಲ್ಲಿ ರಾಜಕೀಯ ಹಸ್ತಕ್ಷೇಪ ಆಗಬಾರದು. ಹಾಗಿದ್ದಲ್ಲಿ ಮಾತ್ರ ನ್ಯಾಯ ನಿರೀಕ್ಷಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕ ಶ್ರೀಕೃಷ್ಣ ಉಪಾಧ್ಯಾಯ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English