ಚಿಲ್ಲರೆ ವಿವಾದ ನದಿಗೆ ಹಾರಿದ ಕೆ.ಎಸ್.ಆರ್.ಟಿ.ಸಿ. ಬಸ್ ನಿರ್ವಾಹಕ

12:02 AM, Monday, September 26th, 2016
Share
1 Star2 Stars3 Stars4 Stars5 Stars
(No Ratings Yet)
Loading...

devadasಸುಬ್ರಹ್ಮಣ್ಯ: ಬಸ್‌ನಲ್ಲಿ ಪ್ರಯಾಣಿಸುತಿದ್ದ ಯುವತಿಯೊಬ್ಬಳು ಚಿಲ್ಲರೆ ಹಣ ವಿಚಾರವಾಗಿ ಬಸ್ ಕಂಡಕ್ಟರ್ ಜತೆ ನಡೆಸಿದ ವಿವಾದಕ್ಕೆ ಸಂಬಂದಿಸಿ ಮನನೊಂದ ಬಸ್ ಕಂಡಕ್ಟರ್ ಚಲಿಸುತಿದ್ದ ಬಸ್‌ನಿಂದ ನದಿಗೆ ಹಾರಿದ ಘಟನೆ ರವಿವಾರ ಸುಬ್ರಹ್ಮಣ್ಯದ ಕುಮಾರಧಾರದಲ್ಲಿ ಸಂಭವಿಸಿದೆ. ಕುಮಾರಧಾರ ನದಿನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ ಮಂಗಳೂರಿನ ಗುರುಪುರ ಕೈಕಂಬ ದೇವದಾಸ್(41) ಆಗಿದ್ದಾರೆ.

ಮಂಗಳೂರು ಸಾರಿಗೆ ಸಂಸ್ಥೆಯ ಒಂದನೆ ಘಟಕಕ್ಕೆ ಸೇರಿದ ಬಸ್‌ನಲ್ಲಿ ದೇವದಾಸ್ ನಿರ್ವಾಹಕ ಕರ್ತವ್ಯದಲ್ಲಿದ್ದ. ಮಂಗಳೂರು ಬಸ್ ನಿಲ್ದಾಣದಿಂದ ಬೆಳಗ್ಗೆ 6.30 ಕ್ಕೆ ಹೊರಟು ಉಪ್ಪಿನಂಗಡಿ ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯ ಕಡೆ ಸಂಚರಿಸುತಿತ್ತು. ಮಂಗಳೂರಿನಲ್ಲಿ ಬಸ್ ಏರಿದ ಯುವತಿ ಟಿಕೇಟ್ ಪಡೆಯುವ ಸಂದರ್ಭ ಗೊಂದಲ ಉಂಟಾಗಿದೆ. ಯುವತಿ ಟಿಕೇಟ್ ಖರೀದಿಗಾಗಿ 500 ರೂ ನೋಟು ನೀಡಿದ್ದಾಗಿ ಹೇಳಿದ್ದು ಬಸ್ ನಿರ್ವಾಹಕ ದೇವದಾಸ್ 100 ರೂ ನೀಡಿದ್ದಾಗಿ ಹೇಳಿ ಅದರಲ್ಲಿ ಚಿಲ್ಲರೆ ಹಣ ಯುವತಿಗೆ ನೀಡಿದ್ದಾನೆ. ಈ ವಿಚಾರವಾಗಿ ಯುವತಿ ಮತ್ತು ನಿರ್ವಹಕನ ನಡುವೆ ಮಾತಿನಚಕಮಕಿ ನಡೆದಿದೆ.

ಚಿಲ್ಲರೆ ಹಣ ವಿಚಾರಕ್ಕೆ ಸಂಬಂದಿಸಿದ ಘಟನೆಯ ವಿಚಾರವಾಗಿ ಯುವತಿ ಮತ್ತೆ ತಗಾದೆ ತೆಗೆದಿದ್ದು ತನ್ನ ಸಂಬಂಧಿಕರಿಗೆ ಮೊಬೈಲ್‌ನಲ್ಲಿ ಕರೆ ಮಾಡಿ ಘಟನೆ ಕುರಿತಂತೆ ತಿಳಿಸಿದ್ದಾಳೆ.  ಪ್ರಕರಣದ ಗಂಭೀರತೆ ಅರಿತುಕೊಂಡ ನಿರ್ವಾಹಕ ಬಸ್ ಕಡಬ ತಲುಪುವ ವೇಳೆಗೆ ಬಸ್ ಚಾಲಕನ ಬಳಿ ಬಸ್ ನಿಲ್ಲಿಸುವಂತೆ ಸೂಚಿಸಿ ಬಸ್‌ನಿಂದ ಇಳಿದು ಯುವತಿ ಜತೆ ನೇರಾ ಕಡಬ ಪೊಲೀಸ್ ಸ್ಟೇಶನ್‌ಗೆ ತೆರಳಿ ನಡೆದ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  ನಡೆದ ಘಟನೆ ಕುರಿತಂತೆ ನಿರ್ವಾಹಕ ದೇವದಾಸ್ ಪೊಲೀಸರ ಮುಂದೆ ನೈಜ ಸಂಗತಿ ಹೇಳಿಕೊಂಡಿದ್ದಾರೆ. ನಿರ್ವಾಹಕ ಮತ್ತು ಯುವತಿ ನಡುವಿನ ಪರಸ್ಪರ ಆರೋಪ-ಪ್ರತ್ಯಾರೋಪ ಕುರಿತಂತೆ ವಿಚಾರಣೆ ನಡೆಸಿದ ಪೊಲೀಸರು ಇಬ್ಬರಿಗೂ ಬುದ್ದಿವಾದ ಹೇಳಿ ಸಮಧಾನಿಸಿ ಕಳುಹಿಸಿಕೊಟ್ಟಿದ್ದರು.

ಬಸ್ ಕಡಬದಿಂದ ಸುಬ್ರಹ್ಮಣ್ಯ ಸಮೀಪ ಕುಮಾರಧಾರ ನದಿ ಸೇತುವೆ ಮೇಲೆ ಬಸ್ ಸಂಚರಿಸುತಿದ್ದ ವೇಳೆ ಸೀಟಿ ಊದಿದಾಗ ಚಾಲಕ ಬಸ್ ನಿಧಾನಗೊಳಿಸಿದ ಈ ಸಮಯ ಬಳಸಿಕೊಂಡ ನಿರ್ವಾಹಕ ಪಕ್ಕದಲ್ಲೆ ತುಂಬಿ ಹರಿಯುತಿದ್ದ ಕುಮಾರಧಾರ ನದಿಗೆ ಬಸ್ ಒಳಗಿನಿಂದಲೆ ಹಾರಿದ್ದಾರೆ.

ನದಿಗೆ ಹಾರಿದ ಕಂಡಕ್ಟರ್ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗುತಿದ್ದ ವೇಳೆ ಅಲ್ಲೆ ಸ್ನಾನ ಘಟ್ಟದ ಮೇಲ್ಭಾಗದಲ್ಲಿ ಸ್ನಾನ ನಡೆಸುತಿದ್ದ ಪ್ರವಾಸಿ ಭಕ್ತರೊಬ್ಬರು ರಕ್ಷಣೆಗೆ ಮುಂದಾಗಿದ್ದು ಮುಳುಗುತಿದ್ದವನ ಕೈ ಹಿಡಿದು ಮೇಲಕ್ಕೆ ತರುವ ಯತ್ನ ನಡೆಸುತಿದ್ದಾಗ ಬಿಡಿಸಿಕೊಂಡು ನೀರು ಪಾಲಾಗಿದ್ದಾನೆ. ದಡದ ಕೆಳಗಿದ್ದವರು ಕೂಡ ರಕ್ಷಣೆಗೆ ಮುಂದಾಗಿದ್ದು ಇದೇ ವೇಳೆ ಅದು ಫಲ ನೀಡಿಲ್ಲ. ಮುಳುಗೇಳುತಿದ್ದ ವೇಳೆ ನಿರ್ವಾಹಕ ಎರಡೂ ಕೈಗಳನ್ನು ಮೇಲಕ್ಕೆತ್ತಿ ಕೈ ಮುಗಿಯುತ್ತಿದ್ದ ಎಂಬುದಾಗಿ ಪ್ರತ್ಯಕ್ಷದರ್ಶಿಗಳು ಕಂಡಿದ್ದಾರೆ.

ಸಾರಿಗೆ ವ್ಯವಸ್ಥೆಯಲ್ಲಿ ಉತ್ತಮ ಕಾರ್ಯವೆಸಗುವ ಮೂಲಕ ಸಜ್ಜನ ವ್ಯಕ್ತಿಯಾಗಿದ್ದ ದೇವದಾಸ್ ಕಳೆದ ವರ್ಷ ಸಾರಿಗೆ ಸಂಸ್ಥೆ ನೌಕರರಿಗೆ ನೀಡುವ ಉತ್ತಮ ನಿರ್ವಾಹಕ ಪ್ರಶಸ್ತಿಗೆ ಭಾಜನರಾಗಿದ್ದರು ಎಂದು ಸಹಪಾಠಿಗಳು ತಿಳಿಸಿದ್ದಾರೆ.

ಪೊಲೀಸ್ ಠಾಣೆಯ ಠಾಣಾಧಿಕಾರಿ ಗೋಪಾಲ ಬಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಸುಬ್ರಹ್ಮಣ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಜೆ ಬಳಿಕ ಶೋಧ ಕಾರ್ಯ ಮುಂದುವರೆದಿದೆ.

ಡೆತ್ ನೋಟ್:
ಮರ್ಯಾದೆ ಹೋಗಿ ಬದುಕುವುದಕ್ಕಿಂತ ಸಾಯುವುದೇ, ಲೇಸು ನನ್ನ ಸಹಪಾಠಿಗಳಿಗೆ ಕೊನೆ ಸಮಸ್ಕಾರಗಳು-ದೇವದಾಸ್

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English