ಭಜನೆ ಮೂಲಕ ಆಂತರಿಕ ಹಾಗೂ ಬಾಹ್ಯ ಉನ್ನತಿ ಮಾಡಿ ಆತ್ಮೋನ್ನತಿ ಸಾಧಿಸಬಹುದು: ಪ್ರಮೋದ್‌ ಮಧ್ವರಾಜ್‌

12:11 PM, Monday, September 26th, 2016
Share
1 Star2 Stars3 Stars4 Stars5 Stars
(No Ratings Yet)
Loading...

pramod-madhwarajಬೆಳ್ತಂಗಡಿ: ರಕ್ತವನ್ನು ಬೆವರಾಗಿಸಿ ಕುಣಿದು ಭಜಿಸುವ ಸೇವೆಗೆ ಭಜನೆಯಲ್ಲಿ ಮಾತ್ರ ಅವಕಾಶ ಇರುವುದು. ಭಜನೆ ಮೂಲಕ ಆಂತರಿಕ ಹಾಗೂ ಬಾಹ್ಯ ಉನ್ನತಿ ಮಾಡಿ ಆತ್ಮೋನ್ನತಿ ಸಾಧಿಸಬಹುದು ಎಂದು ಯುವಜನ, ಮೀನುಗಾರಿಕಾ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

ಅವರು ರವಿವಾರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನ ಪರಿಷತ್‌ ವತಿಯಿಂದ ನಡೆದ 18ನೇ ವರ್ಷದ ಭಜನ ತರಬೇತಿ ಕಮ್ಮಟದ ಸಮಾರೋಪ ಹಾಗೂ ಭಜನೋತ್ಸವದಲ್ಲಿ ಮಾತನಾಡಿದರು.

ಅನನ್ಯ ಭಕ್ತಿಯಿಂದ ಮಾತ್ರ ಮನದ ಪರಿವರ್ತನೆ ಸಾಧ್ಯ. ದೇವರ ಓಲೈಕೆಗೆ ಸರಳ ಮಾರ್ಗ ಭಜನೆ. ಕರಾವಳಿಯಲ್ಲಿ ಹೆಜ್ಜೆ ಹೆಜ್ಜೆಗೆ ಭಜನ ಮಂದಿರಗಳಿವೆ. ಆದ್ದರಿಂದ ಇಲ್ಲಿಗೆ ದೇವರ ಅನುಗ್ರಹ ಇದ್ದು, ಸುನಾಮಿಯಂತಹ ದುರಂತಗಳು ಪಕ್ಕದ ರಾಜ್ಯಗಳಲ್ಲಿ ಸಂಭವಿಸಿದರೂ ನಮ್ಮಲ್ಲಿ ಆಗಿಲ್ಲ ಎಂದರು.

ನಾನು ಧರ್ಮಸ್ಥಳದ ಭಕ್ತ. ಹೆಗ್ಗಡೆ ಅವರು ಧಾರ್ಮಿಕ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದು, ನಾನು ಎಳವೆಯಿಂದಲೇ ಅವರನ್ನು ಕಂಡು ಬೆರಗಾದವ. ಅವರ ಶಿಷ್ಯರ ಪೈಕಿ ನಾನೂ ಒಬ್ಬನಾಗಿದ್ದು, ಅವರ ಆಶೀರ್ವಾದದಿಂದ ಇಂದು ಸಚಿವನಾಗಿದ್ದೇನೆ ಎಂದರು.

ಬೆಂಗಳೂರಿನ ಇಸ್ಕಾನ್‌ ಅಧ್ಯಕ್ಷ ಮಧುಪಂಡಿತದಾಸ್‌ ಮಾತನಾಡಿ,ಆಧ್ಯಾತ್ಮಿಕ ಸಂಸ್ಥೆಗಳು ಹೇಗೆ ಜನಸಾಮಾನ್ಯರ ಸೇವೆ ಸಲ್ಲಿಸಬೇಕೆಂದು ಮಾದರಿಯಾದವರು ಧರ್ಮಸ್ಥಳದ ಹೆಗ್ಗಡೆ ಅವರು. ಜನಸಾಮಾನ್ಯರಿಗೆ ಅಭಿಮಾನದಿಂದ ಜೀವಿಸಲು ಅವಕಾಶ ಕಲ್ಪಿಸಿ ಕೊಟ್ಟವರು.

ಜನಸೇವೆ ಮೂಲಕ ಭಗವಂತನ ಸೇವೆ ಮಾಡುತ್ತಾ ಆತ್ಮಧರ್ಮದ ಸೇವಾ ಕೈಂಕರ್ಯ ತಳೆದು ಅನೇಕ ವಿಚಾರಗಳನ್ನು ಒಂದೇ ಕೇಂದ್ರದಿಂದ ಸೇವೆ ಸಲ್ಲಿಸುವ ವ್ಯಕ್ತಿ ಲೋಕಧಿದಲ್ಲಿ ಇರುವುದು ಒಬ್ಬರೇ. ಅದು ಹೆಗ್ಗಡೆಯವರು ಮಾತ್ರ. ಆತ್ಮಧರ್ಮವೇ ಸೇವೆ ಎಂದು ಪರಿಭಾವಿಸಿ ಎಲ್ಲ ಜನಕಲ್ಯಾಣಗಳನ್ನೂ ಭಗವಂತನಿಗೆ ಅರ್ಪಿಸಿದವರು ಅವರು ಎಂದರು.

ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಭಕ್ತಿಪಂಥದ ಮೂಲಕ ದೇವರನ್ನು ತಲುಪಬಹುದು, ಸ್ಪರ್ಶಿಸಬಹುದು, ಅನುಭವಿಸಬಹುದು. ಮದ, ಮೋಹ, ಅಹಂಕಾರ ತ್ಯಜಿಸಿ ಭಗವಂತನಿಗೆ ಸಂಪೂರ್ಣ ಶರಣಾಗಬಹುದು. ಭಗವಂತನ ಅನುಗ್ರಹಕ್ಕಾಗಿ ಧ್ಯಾನ ಹಾಗೂ ಪ್ರಾರ್ಥನೆ ಎಂಬ ಎರಡು ದಾರಿಗಳಿವೆ. ನಾವು ದೇವರಲ್ಲಿ ನಿವೇದಿಸಿಕೊಳ್ಳುವುದು ಪ್ರಾರ್ಥನೆಯಾದರೆ ಧ್ಯಾನದ ಮೂಲಕ ಭಗವಂತನಲ್ಲಿ ನೇರ ಅನುಸಂಧಾನ ನಡೆಸಲು ಸಾಧ್ಯವಾಗುವುದು ಧ್ಯಾನಕ್ಕೆ ಎಂದರು.

ಭಜನ ಮಂದಿರಗಳಲ್ಲಿ ಜಾತೀಯತೆ ಬರಬಾರದು. ಎಲ್ಲ ಭಕ್ತರೂ ಸಮಾನರು, ಎಲ್ಲ ಆತ್ಮಕ್ಕೂ ಸಮಾನ ಗೌರವ, ಸಮಾನ ಚಿಂತನೆ ಇರಬೇಕು. ಇನ್ನಷ್ಟು ಮಂದಿಗೆ ಭಜನೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ದೊರೆಯಬೇಕು ಎಂದರು.

ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಉಪಸ್ಥಿತರಿದ್ದರು.ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನ ಪರಿಷತ್‌ ಕಮ್ಮಟ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್‌ ಸ್ವಾಗತಿಸಿ, ಪರಿಷತ್‌ ಸಂಚಾಲಕ ಬಿ. ಸೀತಾರಾಮ ತೊಳ್ಪಾಡಿತ್ತಾಯ ವಂದಿಸಿದರು. ಕಮ್ಮಟ ಕಾರ್ಯದರ್ಶಿ ಮಮತಾ ರಾವ್‌ ವರದಿ ಮಂಡಿಸಿದರು. ಶ್ರೀನಿವಾಸ ರಾವ್‌, ಗಂಗಾಧರ ಭಂಡಾರಿ ಕಾಯರ್ತಡ್ಕ ನಿರ್ವಹಿಸಿದರು.

ಉ.ಕ, ದ.ಕ., ಉಡುಪಿ, ಬೆಂಗಳೂರು, ಕುಂದಗೋಳ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಕಾಸರಗೋಡು ಜಿಲ್ಲೆಗಳ 131 ಮಂಡಳಿಗಳ 220 ಮಂದಿ ತರಬೇತಿ ಪಡೆದರು. 160 ಪುರುಷರು, 60 ಮಹಿಳೆಯರಿದ್ದರು. 35ಕ್ಕಿಂತ ಕಡಿಮೆ ವಯೋಮಾನದ 65 ಮಂದಿ ಇದ್ದರು. ಸಮಾರೋಪದಂದು ಸಾವಿರಾರು ಭಜಕರಿಂದ ಭಜನೋತ್ಸವ ನಡೆಯಿತು. ಆಕರ್ಷಕ ಮೆರವಣಿಗೆ, ಇಸ್ಕಾನ್‌ನವರಿಂದ ಭಜನ ಪ್ರಾತ್ಯಕ್ಷಿಕೆ ನಡೆಯಿತು. ಮನೋರಮಾ ತೋಳ್ಪಾಡಿತ್ತಾಯ, ಎಂ.ಎಸ್‌. ಗಿರಿಧರ್‌ ಹಾಡುಗಾರಿಕೆಯಲ್ಲಿ ರಮೇಶ್‌ ಕಲ್ಮಾಡಿ, ಶಂಕರ್‌ ನಿರ್ದೇಶನದಲ್ಲಿ ಕುಣಿತ ಭಜನೆ ನಡೆಯಿತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English