ಮಂಗಳೂರು: ಮಹಾನಗರ ಪಾಲಿಕೆಗೆ ಕೊನೆಗೂ ಕೇಂದ್ರ ಕಚೇರಿ ಹಾಗೂ ಮೂರು ವಲಯ ಕಚೇರಿಗಳನ್ನು ರಚನೆ ಮಾಡಲಾಗಿದೆ. ವಲಯ 1ರ ಕಚೇರಿಯನ್ನು ಸುರತ್ಕಲ್‌ನಲ್ಲಿ ಆರಂಭಿಸಿ, ವಲಯ-2 ಮತ್ತು 3ನ್ನು ಪಾಲಿಕೆಯ ಕೇಂದ್ರ ಕಚೇರಿಯಲ್ಲೇ ಉಳಿಸುವ ಮಹತ್ವದ ನಿರ್ಣಯವನ್ನು ವಿಶೇಷ ಸಭೆಯಲ್ಲಿ ಕೈಗೊಳ್ಳಲಾಗಿದೆ. ಅ.15ರಿಂದ ಈ ವಲಯ ಕಚೇರಿಗಳು ಕಾರ್ಯಾರಂಭಿಸಲಿವೆ ಎಂದು ಎಂದು ಮೇಯರ್ ಹರಿನಾಥ್ ತಿಳಿಸಿದ್ದಾರೆ.
ಸುರತ್ಕಲ್ ವಲಯಕ್ಕೆ ಸೇರುವ 12 ವಾರ್ಡ್‌ಗಳ ನಾಗರಿಕರು ಇನ್ನು ಮುಂದೆ ನಿಗದಿತ ಸೇವೆಗಳನ್ನು ಪಡೆಯಲು ಪಾಲಿಕೆಯ ಕೇಂದ್ರ ಕಚೇರಿಗೆ ಬರಬೇಕೆಂದಿಲ್ಲ. ಅಲ್ಲಿಯೇ ಪಾಲಿಕೆಯ ವಲಯ ಕಚೇರಿ ಆರಂಭಿಸಲಾಗುತ್ತದೆ. ಆದರೆ ಈ ಮೊದಲು ಕದ್ರಿಯಲ್ಲಿ ಆರಂಭಿಸಲು ಉದ್ದೇಶಿಸಿದ್ದ ವಲಯ-3 ಕಚೇರಿ ಮತ್ತು ಕೇಂದ್ರ ಕಚೇರಿಯಲ್ಲೇ ಕಾರ್ಯನಿರ್ವಹಿಸಲು ಉದ್ದೇಶಿಸಿದ್ದ ವಲಯ 2ರ ಕಚೇರಿಯನ್ನು ಪಾಲಿಕೆಯ ಕೇಂದ್ರ ಕಚೇರಿಯಲ್ಲೇ ಉಳಿಸಿಕೊಳ್ಳಲಾಗುವುದು. ಜನತೆಗೆ ಸರ್ಕಾರಿ ಸೇವೆ ದೊರೆಯಲು ಅನುಕೂಲ ಮಾಡುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವಲಯಗಳನ್ನಾಗಿ ವಿಭಜಿಸಿದರೆ ಆಡಳಿತಾತ್ಮಕವಾಗಿಯೂ ಅನುಕೂಲವಾಗಲಿದೆ ಎಂದರು.
ಇದಕ್ಕೂ ಮೊದಲು ನಡೆದ ಸಭೆಯಲ್ಲಿ ಹಲವು ಸದಸ್ಯರು ತಮ್ಮ ವಾರ್ಡ್‌ಗಳನ್ನು ಕದ್ರಿ ವಲಯಕ್ಕೆ ಸೇರಿಸುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕೆಲ ವಾರ್ಡ್‌ಗಳನ್ನು ಬೇರೆ ವಲಯಕ್ಕೆ ಸೇರಿಸುವಂತೆಯೂ ಆಗ್ರಹಿಸಿದರು. ಪಾಲಿಕೆಯ ಮುಖ್ಯ ಸಚೇತಕ ಶಶಿಧರ್ ಹೆಗ್ಡೆ ಮಾತನಾಡಿ, ಎಲ್ಲಾ ವಾರ್ಡ್‌ಗಳಿಂದಲೂ ಪಾಲಿಕೆಗೆ ಸೂಕ್ತ ಬಸ್ ವ್ಯವಸ್ಥೆ ಇದೆ. ಕದ್ರಿಯಲ್ಲಿ ವಲಯ ಕಚೇರಿ ಆರಂಭಿಸಿದರೆ ನಾಗರಿಕರಿಗೆ ಸಂಚರಿಸಲು ಅನುಕೂಲವಾಗುತ್ತದೆ ಎಂದು ಮನವರಿಕೆ ಮಾಡಿದರು.
ಪಾಲಿಕೆ ಆಯುಕ್ತ ಮಹಮ್ಮದ್ ನಝೀರ್ ಮಾತನಾಡಿ, ಸುರತ್ಕಲ್‌ನಲ್ಲಿ ವಲಯ ಕಚೇರಿ ಆರಂಭಿಸಲು ಸೂಕ್ತ ಪರಿಶೀಲನೆ ನಡೆಸಲಾಗಿದ್ದು, ಸೂಕ್ತ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಅಗತ್ಯ ಬಿದ್ದರೆ ಇಂದಿನಿಂದಲೇ ಅಲ್ಲಿ ಕಚೇರಿ ಕಾರ್ಯಾರಂಭಿಸಬಹುದು ಎಂದರು.
ಬಿಜೆಪಿ ಸದಸ್ಯ ಸುಧೀರ್ ಶೆಟ್ಟಿ ಮಾತನಾಡಿ, ವಲಯ ಕಚೇರಿಯಲ್ಲಿ ದೊರೆಯುವ ನಿಗದಿತ ಸೇವೆಗಳ ಕುರಿತು ಜನರಿಗೆ ಮೊದಲೇ ಮಾಹಿತಿ ನೀಡಬೇಕು. ಅವರನ್ನು ಕೇಂದ್ರ ಕಚೇರಿ ಮತ್ತು ವಲಯ ಕಚೇರಿಗೆ ಅಲೆಸಬಾರದು ಎಂದು ಒತ್ತಾಯಿಸಿದರು.
Click this button or press Ctrl+G to toggle between Kannada and English