ದ.ಕ ಜಿಲ್ಲಾ ಪೊಲೀಸರಿಂದ 5 ಮಂದಿ ಅಂತಾರಾಜ್ಯ ಕಳ್ಳರ ಬಂಧನ

12:56 PM, Wednesday, September 28th, 2016
Share
1 Star2 Stars3 Stars4 Stars5 Stars
(No Ratings Yet)
Loading...

mangalore-policeಮಂಗಳೂರು: ಕರ್ನಾಟಕದ ನಾನಾ ದೇವಸ್ಥಾನಗಳು ಸೇರಿದಂತೆ ಮಹಾರಾಷ್ಟ್ರದಲ್ಲಿ ಕಳವು ಪ್ರಕರಣದಲ್ಲಿ ಭಾಗಿಯಾದ 5 ಮಂದಿ ಅಂತಾರಾಜ್ಯ ಕಳ್ಳರನ್ನು ದ.ಕ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಮುಂಬೈನ ಥಾಣಾದಲ್ಲಿ ಬಂಧಿಸಿರುವ ಪೊಲೀಸರು ಆರೋಪಿಗಳಿಂದ 22 ಕೆಜಿ ಬೆಳ್ಳಿ ಹಾಗೂ 75 ಗ್ರಾಂ ಚಿನ್ನ ಸೇರಿದಂತೆ ಒಟ್ಟು 12.5 ಲಕ್ಷ ರು. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಹೊನ್ನಾವರದ ಚಂದ್ರಕಾಂತ ಪೂಜಾರಿ (36), ದೊಡ್ಡಬಳ್ಳಾಪುರದ ನರಸಿಂಹ ರಾಜು (38), ಮಹಾರಾಷ್ಟ್ರ-ಥಾಣೆಯ ನವೀನ್ ಚಂದ್ರ ಬಾನ್ ಸಿಂಗ್ (21), ವಿಜಯ ಸುರೇಶ್ ಬೋನ್ಸೆ (35) ಹಾಗೂ ವಿಶಾಲ್ ಪೋನ್ಕೆ (21) ಬಂಧಿತ ಆರೋಪಿಗಳು.

ಈ ಆರೋಪಿಗಳು ಈ ಹಿಂದೆ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಶಿಕ್ಷೆ ಅನುಭವಿಸಿದ್ದರು. ಆರೋಪಿಗಳಿಂದ ವಶಪಡಿಸಿಕೊಂಡ ಚಿನ್ನಾಭರಣಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಬಳಿಕ, ಒಪ್ಪಿಗೆ ಪಡೆದು ಸಂಬಂಧಪಟ್ಟ ದೇವಸ್ಥಾನಗಳಿಗೆ ನೀಡಲಾಗುವುದು ಎಂದು ಎಂದು ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ ರಾವ್ ಬೋರಸೆ ತಿಳಿಸಿದ್ದಾರೆ.

ಜಿಲ್ಲೆಯ ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಬೆಳ್ತಂಗಡಿಯ ಉರುವಾಲು ಗ್ರಾಮದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಪಟ್ರಮೆ ಗ್ರಾಮದ ಅನಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಪುತ್ತೂರು ತಾಲೂಕಿನ ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಬಲ್ಯ ಗ್ರಾಮದ ಶ್ರೀ ಉಮಾಮಹೇಶ್ವರಿ ದೇವಸ್ಥಾನ, ರಾಮಕುಂಜದ ಶ್ರೀ ಅನಂತಪದ್ಮನಾಭ ದೇವಸ್ಥಾನ, ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೇವಸ್ಥಾನ, ಬಂಟ್ವಾಳ ತಾಲೂಕಿನ ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಮಂಗಳೂರಿನ ಅದ್ಯಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ತೋಕೂರಿನ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣಗಳನ್ನು ಭೇದಿಸಲು ವಿಶೇಷ ತಂಡ ರಚಿಸಲಾಗಿತ್ತು.

ಆರೋಪಿಗಳು ಕಳ್ಳತನ ಮಾಡಿದ ಸೊತ್ತುಗಳನ್ನು ಬೆಳ್ಳಿ ವ್ಯಾಪಾರಿ ವಿಶಾಲ್ ಎಂಬಾತ ಮುಂಬೈಗೆ ಮಾರುತ್ತಿದ್ದ. ಈತ ದೇವಸ್ಥಾನಗಳ ಹಳೆಯ ಸೊತ್ತೆಂದು ಇತರರಿಗೆ ಮಾರಾಟ ಮಾಡುತ್ತಿದ್ದ. ಈತನೊಂದಿಗೆ ಮುಂಬೈಗೆ ತೆರಳಿ ಅಲ್ಲಿ ಹತ್ತು ದೇವಸ್ಥಾನಗಳಲ್ಲಿ ಕಳವು ಮಾಡಿದ್ದ 22 ಕೆಜಿ ಬೆಳ್ಳಿ ಹಾಗೂ 75 ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರ ತಂಡ ಯಶಸ್ವಿಯಾಗಿದೆ.

ಈ ಪ್ರಕರಣವನ್ನು ಯಶಸ್ವಿಯಾಗಿ ಭೇಧಿಸಿದ ಡಿಸಿಐಬಿ ಇನ್ಸ್ ಪೆಕ್ಟರ್ ಅಮಾನುಲ್ಲಾ ನೇತೃತ್ವದ ತಂಡವನ್ನು ಅಭಿನಂದಿಸಿ ಸಿಬ್ಬಂದಿ ಹಾಗೂ ಹಿರಿಯ ಅಧಿಕಾರಿಗಳಿಗೆ ಸೂಕ್ತ ನಗದು ಬಹುಮಾನ ನೀಡಿ ಗೌರವಿಸುವುದಾಗಿ ದ.ಕ ಜಿಲ್ಲಾ ವರಿಷ್ಠಾಧಿಕಾರಿ ಹೇಳಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English