ಬ್ಯಾಂಕ್ ಮೆನೇಜರ್‌ರನ್ನು ದರೋಡೆಗೈಯಲು ಹೊಂಚುಹಾಕಿದ್ದ ಆರು ಮಂದಿಯ ಬಂಧನ

11:59 AM, Thursday, September 29th, 2016
Share
1 Star2 Stars3 Stars4 Stars5 Stars
(No Ratings Yet)
Loading...

honey-trapಮಂಗಳೂರು: ಯುವತಿಯನ್ನು ಮುಂದಿಟ್ಟುಕೊಂಡು ಬ್ಯಾಂಕ್ ಮೆನೇಜರ್‌ ಒಬ್ಬರಿಗೆ ಪಂಗನಾಮ ಹಾಕಲು ಹೋಗಿದ್ದ ಓರ್ವ ಯುವತಿ ಸೇರಿದಂತೆ ಆರು ಮಂದಿಯನ್ನು ಉರ್ವ ಹಾಗೂ ಬರ್ಕೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಯುವತಿಯರನ್ನು ಬಳಸಿಕೊಂಡು ನಗರದ ಬಳ್ಳಾಲ್‌ಬಾಗ್ ನಿವಾಸಿ ಬ್ಯಾಂಕ್ ಮೆನೇಜರ್‌ರನ್ನು ದರೋಡೆಗೈಯಲು ಹೊಂಚುಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿಯನ್ನು ಬಂಧಿಸಿರುವ ಪೊಲೀಸರು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗಳಿಗೆ 15 ದಿನಗಳ ಕಾಲ ನ್ಯಾಯಾಂಗ ಸೆರೆ ವಿಧಿಸಿ ಆದೇಶ ನೀಡಿದೆ.

ಬಂಧಿತರನ್ನು ತೃಪ್ತಿ ಕುಲಾಲ್ ಕೋಟೆಕಾರ್, ಅವಿನಾಶ್ ಕೊಣಾಜೆ, ಸಚಿನ್ ಪದವಿನಂಗಡಿ, ರಾಜೇಶ್ ಶೆಟ್ಟಿ, ಯತೀಶ್ ಪೂಜಾರಿ, ಶ್ರೀಜಿತ್, ನಿತಿನ್ ಎಂದು ಹೆಸರಿಸಲಾಗಿದೆ.

ಹನಿಟ್ರ್ಯಾಪ್ ದಂಧೆಯ ಪ್ರಮುಖ ಸೂತ್ರಧಾರಿಯಾಗಿರುವ ಶಿಲ್ಪಾಳ ಕಾಲಿಗೆ ಏಟು ತಗಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆಕೆಯನ್ನು ಇನ್ನಷ್ಟೇ ವಶಕ್ಕೆ ಪಡೆದುಕೊಳ್ಳಬೇಕಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಬ್ಯಾಂಕ್ ಮೆನೇಜರ್ ಸ್ನೇಹ ಬೆಳೆಸಿದ್ದ ಶಿಲ್ಪಾ ಅವರನ್ನು ದರೋಡೆಗೈಯಲು ತೃಪ್ತಿಯನ್ನು ಬಳಸಿಕೊಂಡಿದ್ದು, ಅದರಂತೆ ಬ್ಯಾಂಕ್ ಎಕ್ಸಾಮ್ ಬರೆಯಲು ಸಹಾಯ ಯಾಚಿಸಿ ತೃಪ್ತಿ ಮೆನೇಜರ್ ಫ್ಲ್ಯಾಟ್‌ಗೆ ಆಗಾಗ ಭೇಟಿಯಾಗುತ್ತಿದ್ದಳು ಎನ್ನಲಾಗಿದೆ. ಮೆನೇಜರ್ ಪತ್ನಿ ತವರುಮನೆಗೆ ತೆರಳಿದ್ದ ಸಂದರ್ಭ ಅಲ್ಲಿಗೆ ತೆರಳಿದ್ದ ತೃಪ್ತಿ ತನ್ನ ಸಹಚರರನ್ನು ಕರೆದಿದ್ದಳು.

ಏಕಾಏಕಿ ಮನೆಗೆ ಎಂಟ್ರಿ ಕೊಟ್ಟಿದ್ದ ಅವಿನಾಶ್ ಸಹಿತ ಇತರರು ಮೆನೇಜರ್ ಮೇಲೆ ಹಲ್ಲೆ ನಡೆಸಿ ಬೆದರಿಸಿದ್ದಲ್ಲದೆ ತೃಪ್ತಿ ಮತ್ತು ಮೆನೇಜರ್ ಜೊತೆಯಾಗಿರುವ ಅನೇಕ ಚಿತ್ರಗಳನ್ನು ಮೊಬೈಲ್ ಕೆಮರಾದಲ್ಲಿ ಸೆರೆಹಿಡಿದಿದ್ದರು. ಇದನ್ನು ಪತ್ನಿಗೆ ತೋರಿಸುತ್ತೇವೆ, ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತೇವೆ ಎಂದು ಬೆದರಿಸಿ ಹಣಕ್ಕಾಗಿ ಡಿಮ್ಯಾಂಡ್ ಇರಿಸಿದ್ದರು. ಮೆನೇಜರ್ ಮಾನಕ್ಕೆ ಅಂಜಿ ಸಹಿ ಮಾಡಲ್ಪಟ್ಟ ಎರಡು ಖಾಲಿ ಚೆಕ್, ಚಿನ್ನಾಭರಣ, ದಾಖಲೆಪತ್ರ ಸಮೇತ ಬೈಕ್ ಮತ್ತು 2 ಸಾವಿರ ರೂ. ನಗದು ನೀಡಿದ್ದರು. ಆದರೆ ಆರೋಪಿಗಳು ಮತ್ತೆ ಮತ್ತೆ ಹಣ ಕೊಡುವಂತೆ ಬ್ಲ್ಯಾಕ್‌ಮೇಲ್‌ಗೆ ಇಳಿದಿದ್ದು ಕೊನೆಗೆ ಮೆನೇಜರ್ ಬೇರೆ ದಾರಿ ಕಾಣದೆ ಪರಿಚಯದ ಪೊಲೀಸ್ ಅಧಿಕಾರಿಯೊಬ್ಬರಿಗೆ ಘಟನೆಯನ್ನು ವಿವರಿಸಿದ್ದರು.

ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ತೃಪ್ತಿ ಸಹಿತ ಆರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬಂಧಿತರಲ್ಲಿ ತೃಪ್ತಿ ‘ಹನಿಟ್ರ್ಯಾಪ್’ ದಂಧೆಗೆ ಹೊಸಬರಾಗಿದ್ದರೆ, ಶಿಲ್ಪಾ ಈ ಹಿಂದೆಯೂ ಇದೇ ರೀತಿಯ ಕೃತ್ಯದಲ್ಲಿ ಪಾಲ್ಗೊಂಡಿರುವ ಮಾಹಿತಿ ಲಭಿಸಿದೆ. ಈ ಹಿಂದೆ ಉಳ್ಳಾಲದ ದೇರಳಕಟ್ಟೆ ಪರಿಸರದಲ್ಲಿಯೂ ಇಂಥದ್ದೇ ದಂಧೆಯಲ್ಲಿ ಪಾಲ್ಗೊಂಡಿದ್ದ ‘ಟಾರ್ಗೆಟ್’ ಗ್ಯಾಂಗ್ ಸದಸ್ಯರನ್ನು ಪೊಲೀಸರು ಬಂಧಿಸಿದ್ದನ್ನು ಸ್ಮರಿಸಬಹುದಾಗಿದೆ.

ಶಿಲ್ಪಾ ಎಂಬ ಯುವತಿಯಿಂದ ಷಡ್ಯಂತ್ರ

ಯುವತಿಯನ್ನು ಮುಂದಿಟ್ಟುಕೊಂಡು ಬ್ಯಾಂಕ್ ಮೆನೇಜರ್‌ ಒಬ್ಬರಿಗೆ ಪಂಗನಾಮ ಹಾಕಲು ಹೋಗಿದ್ದ ಓರ್ವ ಯುವತಿ ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶ್ರೀಜಿತ್, ಯತೀಶ್, ಅವಿನಾಶ್, ನಿತಿನ್, ರಂಜಿತ್ ಹಾಗೂ ತೃಪ್ತಿ ಬಂಧಿತರು. ಬಳ್ಳಾಲ್‍ಭಾಗ್‍ನ ಫ್ಲ್ಯಾಟೊಂದರಲ್ಲಿ ಬ್ಯಾಂಕ್ ಮ್ಯಾನೇಜರ್ ವಾಸವಾಗಿದ್ದರು. ಇದೇ ಫ್ಲಾಟ್‍ನಲ್ಲಿ ಶಿಲ್ಪಾ ಎಂಬ ಯುವತಿ ಕೂಡಾ ವಾಸವಾಗಿದ್ದಳು. ಆದರೆ, ಆಕೆಯ ವರ್ತನೆಯಲ್ಲಿ, ವ್ಯವಹಾರದಲ್ಲಿ ಸಂಶಯ ಬಂದದ್ದರಿಂದ ಆಕೆಯನ್ನು ಆ ಫ್ಲ್ಯಾಟ್‍ನಿಂದ ಓಡಿಸಲಾಗಿತ್ತು. ಈಕೆಯ ಬಳಿ ಬ್ಯಾಂಕ್ ಮ್ಯಾನೇಜರ್ ಅವರ ಮೊಬೈಲ್ ಸಂಖ್ಯೆ ಇದ್ದಿದ್ದೇ ಸಮಸ್ಯೆಗೆ ಕಾರಣವಾಯಿತು.

ಬ್ಯಾಂಕ್ ಪರೀಕ್ಷೆ ಬರೆದಿರುವ ಯುವತಿಯೊಬ್ಬಳಿಗೆ ಉದ್ಯೋಗ ನೀಡುವಲ್ಲಿ ಸಹಕರಿಸಬೇಕು ಎಂದು ಬ್ಯಾಂಕ್ ಮ್ಯಾನೇಜರ್‌ಗೆ ಶಿಲ್ಪಾ ಕರೆ ಮಾಡಿದ್ದಳು. ಈ ವೇಳೆ ಆಕೆಯನ್ನು ಕಚೇರಿಗೆ ಬರಲು ಹೇಳಿ ಎಂದು ಮ್ಯಾನೇಜರ್ ಹೇಳಿದಾಗ, ಕಚೇರಿಗೆ ಬೇಡ ಮನೆಗೆ ಹೋಗಲು ಹೇಳುತ್ತೇನೆ ಎಂದು ಶಿಲ್ಪಾ ಹೇಳಿದ್ದಾಳೆ. ಬ್ಯಾಂಕ್ ಮ್ಯಾನೇಜರ್ ಅವರ ಮನೆಯವರು ಬೆಂಗಳೂರಿನಲ್ಲಿರುವುದರಿಂದ ಶಿಲ್ಪಾ ಷಡ್ಯಂತ್ರ ರೂಪಿಸಿದ್ದಾಳೆ.

ಮ್ಯಾನೇಜರ್ ಮನೆಗೆ ಯುವತಿ ತೃಪ್ತಿ ಹಾಗೂ ಐವರನ್ನು ಕಳುಹಿಸಿದ್ದಾಳೆ. ಈ ತಂಡ ಎರಡು ದಿನಗಳೊಳಗೆ ಒಂದು ಲಕ್ಷ ರೂ. ನೀಡಬೇಕು. ಇಲ್ಲದಿದ್ದಲ್ಲಿ ಮನೆಯಲ್ಲೇ ವೇಶ್ಯಾವಾಟಿಕೆ ಮಾಡುತ್ತಿದ್ದೀರೆಂದು ಪ್ರಚಾರ ಮಾಡುವುದಾಗಿ ಮ್ಯಾನೇಜರ್‌ಗೆ ಬೆದರಿಸಿದ್ದಾರೆ.

ಬಳಿಕ ಇವರಲ್ಲಿದ್ದ ಚೆಕ್‍ಬುಕ್ ಹಾಗೂ ಕೆಲವು ದಾಖಲೆಗಳನ್ನು ಕೊಂಡೊಯ್ದ ಆರೋಪಿಗಳು ಲಕ್ಷ ರೂ.ಗೆ ಪೀಡಿಸುತ್ತಿದ್ದರು. ಬಳಿಕ ಮ್ಯಾನೇಜರ್ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಸಿದ್ಧರಾದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಮುಖ ಆರೋಪಿ ಶಿಲ್ಪಾ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ಸದ್ಯ ಈಕೆ ಕಾಲುಮೂಳೆ ಮುರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈಕೆಯನ್ನು ಬಂಧಿಸಿಲ್ಲ. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English