ಮಂಗಳೂರು: ‘ಸ್ವಚ್ಛ ಭಾರತ ಮಿಷನ್’ ಕಾರ್ಯಕ್ರಮದಡಿ ಮಂಗಳಾದೇವಿ ಸಮೀಪದ ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಹಮ್ಮಿಕೊಂಡಿರುವ ‘ಸ್ವಚ್ಛ ಮಂಗಳೂರು’ ತೃತೀಯ ಹಂತದ ಅಭಿಯಾನಕ್ಕೆ ನಾಳೆ ಚಾಲನೆ ದೊರೆಯಲಿದೆ ಎಂದು ರಾಮಕೃಷ್ಣ ಮಿಷನ್ ಕಾರ್ಯದರ್ಶಿ ಸ್ವಾಮಿ ಜಿತಕಾಮಾನಂದ ಹೇಳಿದರು.
ಶುಕ್ರವಾರ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾತ್ಮಾ ಗಾಂಧೀಜಿಯವರ ಜನ್ಮ ಜಯಂತಿಯಿಂದ ಆರಂಭಿಸಿ ಮುಂದಿನ ಹತ್ತು ತಿಂಗಳುಗಳ ಕಾಲ ತೃತೀಯ ಹಂತದ ಅಭಿಯಾನ ನಡೆಯಲಿದೆ. ಕಳೆದ ಬಾರಿ ಒಂದೇ ತಂಡ ನಗರದ 40 ಬೇರೆ ಬೇರೆ ಸ್ಥಳಗಳಿಗೆ ತೆರಳಿ ಸ್ವಚ್ಛತೆಯ ಕಾರ್ಯ ಕೈಗೊಂಡಿತ್ತು. ಈ ಬಾರಿ ನಗರದ ಬೇರೆ ಬೇರೆ ವಾರ್ಡ್‌ಗಳಲ್ಲಿ ಸುಮಾರು 40 ತಂಡಗಳನ್ನು ರೂಪಿಸಲಾಗಿದೆ.
ಒಟ್ಟು 400 ಸ್ವಚ್ಛತಾ ಕಾರ್ಯಕ್ರಮಗಳನ್ನು ಈ ತಂಡಗಳು ಕೈಗೊಳ್ಳಲಿವೆ. ತಿಂಗಳಿಗೆ ಒಂದು ಭಾನುವಾರದಂತೆ ಪ್ರತಿ ತಂಡ ವರ್ಷಕ್ಕೆ 10 ಸ್ವಚ್ಛತಾ ಕಾರ್ಯಕ್ರಮಗಳನ್ನು ಮಾಡಲಿದೆ. ಮಳೆಗಾಲದ ಎರಡು ತಿಂಗಳು ಹೊರತುಪಡಿಸಿ ಇಡೀ ವರ್ಷ ಈ ಸ್ವಚ್ಛತಾ ಅಭಿಯಾನ ನಡೆಯಲಿದೆ ಎಂದರು.
ಅ.2ರಂದು 400 ಅಭಿಯಾನಗಳಿಗೆ ಚಾಲನೆ ದೊರೆಯಲಿದ್ದು, ಅಂದು ನಗರ ಶುದ್ಧಗೊಳಿಸುವ ಸುಮಾರು 75 ಜನ ಪೌರ ಕಾರ್ಮಿಕರಿಗೆ ಗೌರವ ಸಲ್ಲಿಸಲಾಗುವುದು. 40 ತಂಡಗಳ ಮುಖ್ಯಸ್ಥರಿಗೆ ಸಾಂಕೇತಿಕವಾಗಿ ಸ್ವಚ್ಛತಾ ಸಲಕರಣೆಗಳನ್ನು ಹಸ್ತಾಂತರಿಸಲಾಗುವುದು. ಈ ಕಾರ್ಯಕ್ರಮದ ನಂತರ ಎಲ್ಲಾ 40 ತಂಡಗಳೂ ಮಂಗಳಾದೇವಿಯ ಬಳಿ ಈಗಾಗಲೇ ಗುರುತಿಸಲ್ಪಟ್ಟ ಸುಮಾರು 30 ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಲಿವೆ. ಬಳಿಕ `ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮನಸ್ಸು’ ಕಾರ್ಯಾಗಾರ ನಡೆಯಲಿದೆ ಎಂದರು.
Click this button or press Ctrl+G to toggle between Kannada and English