ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಪದೇ ಪದೇ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಉಪವಾಸ ಸತ್ಯಾಗ್ರಹ ಸುಪ್ರೀಂಕೋರ್ಟ್ ನ್ಯಾಯಾಧೀಶರ ಕಣ್ಣು ತೆರೆಸಬಹುದು ಎನ್ನುವ ಭಾವನೆಯನ್ನು ಗೃಹ ಸಚಿವ ಡಾ. ಜಿ.ಪರಮೇಶ್ವರ್ ವ್ಯಕ್ತಪಡಿಸಿದರು.
ಕಾವೇರಿ ವಿವಾದದಲ್ಲಿ ಪ್ರಧಾನಿಗಳ ಮಧ್ಯಪ್ರವೇಶಕ್ಕೆ ಒತ್ತಾಯಿಸಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸ್ಥಳಕ್ಕೆ ಗೃಹ ಸಚಿವ ಪರಮೇಶ್ವರ್ ಭೇಟಿ ನೀಡಿದರು. ದೇವೇಗೌಡರೊಂದಿಗೆ ಕೆಲ ಕಾಲು ಮಾತುಕತೆ ನಡೆಸಿದರು. ನೀರು ಹರಿಸದಿರುವ ಬಗ್ಗೆ ಸರ್ಕಾರದ ನಿಲುವು ಹಾಗೂ ಸಂಜೆ ನಡೆಯಲಿರುವ ಸರ್ವಪಕ್ಷ ಸಭೆಯ ಬಗ್ಗೆ ಮಾಹಿತಿ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ಸೆಪ್ಟೆಂಬರ್ ಒಂದೇ ತಿಂಗಳಲ್ಲಿ ಆರು ಬಾರಿ ನಮಗೆ ಹಿನ್ನಡೆ ಆಗಿದೆ. ನಮಗೆ ಕುಡಿಯಲೂ ನೀರಿಲ್ಲ ಹಾಗಾಗಿ ತಮಿಳುನಾಡಿಗೆ ನೀರು ಬಿಡಲು ಆಗಲ್ಲ ಎಂದು ಸಾಕಷ್ಟು ಬಾರಿ ಹೇಳಿದ್ದೇವೆ. ಆದರೂ ಮತ್ತೆ ನೀರು ಬಿಡಲು ಕೋರ್ಟ್ ಹೇಳಿದೆ. ಹೀಗಾಗಿ ಸರ್ವಪಕ್ಷ ಸಭೆಯಲ್ಲಿ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.
ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಜೀವನವೀಡಿ ನೀರಾವರಿಗಾಗಿ ಹೋರಾಡಿದ್ದಾರೆ. ಈಗ ಕಾವೇರಿಗಾಗಿ ಅವರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಈ ಇಳಿ ವಯಸ್ಸಿನಲ್ಲೂ ಅವರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಸುಪ್ರೀಂಕೋರ್ಟ್ ನ್ಯಾಯಾಧೀಶರ ಕಣ್ಣು ತೆರೆಸಬಹುದು ಎಂಬ ಭಾವನೆ ಇದೆ ಎಂದರು.
ಸುಪ್ರೀಂ ಆದೇಶ ಪಾಲನೆ ಅಸಾಧ್ಯ, ಅದಕ್ಕಾಗಿಯೇ ಮುಂದಿನ ಹೆಜ್ಜೆ ಇಡುವ ಕುರಿತು ಚರ್ಚಿಸಲು ಮಧ್ಯಾಹ್ನ ಸರ್ವ ಪಕ್ಷಗಳ ಸಭೆ ಕರೆಯಲಾಗಿದೆ. ಸರ್ವಪಕ್ಷ ಸಭೆ ಬಳಿಕ ಸಂಜೆ 6 ಗಂಟೆಗೆ ತುರ್ತು ಮಂತ್ರಿ ಪರಿಷತ್ ಸಭೆ ಕರೆಯಲಾಗಿದೆ. ಸರ್ವಪಕ್ಷ ಸಭೆಯಲ್ಲಿನ ನಿರ್ಧಾರ ಹಾಗೂ ನಾಯಕರ ಸಲಹೆಗಳು, ಅಭಿಪ್ರಾಯಗಳ ಕುರಿತು ಚರ್ಚಿಸಿ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದರು.
ಕಾವೇರಿ ವಿವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶ ಮಾಡುತ್ತಾರೆ ಅನ್ನೋ ವಿಶ್ವಾಸವಿತ್ತು. ಆದರೆ ಕೇಂದ್ರ ಸರ್ಕಾರ ಕೂಡ ನಮ್ಮ ವಿರುದ್ಧವಾಗೇ ಇದೆ. ಒಂದೆಡೆ ಸುಪ್ರೀಂಕೋರ್ಟ್ ಇನ್ನೊಂದೆಡೆ ಕೇಂದ್ರ ಸರ್ಕಾರ. ಪರಿಸ್ಥಿತಿ ಹೀಗಿರುವಾಗಿ ನಾವು ನ್ಯಾಯಕ್ಕಾಗಿ ಎಲ್ಲಿಗೆ ಹೋಗಬೇಕು ಎಂದು ಪರಮೇಶ್ವರ್ ಬೇಸರ ವ್ಯಕ್ತಪಡಿಸಿದರು.
ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿರುವುದು ಆಶ್ಚರ್ಯ ತಂದಿದೆ. ಇದರ ವಿರುದ್ಧ ಪಕ್ಷಾತೀತವಾಗಿ ಹೋರಾಟ ಮಾಡಬೇಕಾಗಿದೆ. ದೇವೇಗೌಡರೂ ಹೋರಾಟ ಮಾಡುತ್ತಿದ್ದಾರೆ. ನಾವೆಲ್ಲರೂ ಸೇರಿ ಹೋರಾಟ ನಡೆಸಬೇಕಿದೆ ಎಂದರು.
ಮೂರು ದಶಕಕ್ಕೂ ಹೆಚ್ಚಿನ ಕಾಲದಿಂದ ರಾಜ್ಯದ ನದಿ ನೀರಿನ ಹಂಚಿಕೆ ವಿವಾದ ಪ್ರಕರಣಗಳಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಫಾಲಿ ಎಸ್.ನಾರಿಮನ್ ಅವರಿಗೆ ರಾಜ್ಯ ಸರ್ಕಾರ ಗೇಟ್ ಪಾಸ್ ನೀಡುವ ಚಿಂತನೆ ನಡೆಸಿದೆ. ಈ ಕುರಿತು ಮಾಹಿತಿ ನೀಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ವಕೀಲರ ಬದಲಾವಣೆ ಬಗ್ಗೆ ಚರ್ಚೆ ಮಾಡುವ ಅನಿವಾರ್ಯತೆ ನಿರ್ಮಾಣವಾಗಿದೆ ಎನ್ನುವ ಹೇಳಿಕೆ ನೀಡಿದ್ದಾರೆ.
Click this button or press Ctrl+G to toggle between Kannada and English