ಅಡುಗೆ ಅನಿಲ ಸಮಸ್ಯೆ ದ.ಕ ಜಿಲ್ಲಾ ಕಾಂಗ್ರೆಸ್‌ ಕಾರ್ಯಕರ್ತರಿಂದ ಪ್ರತಿಭಟನೆ

1:26 PM, Saturday, July 30th, 2011
Share
1 Star2 Stars3 Stars4 Stars5 Stars
(No Ratings Yet)
Loading...

Congress Protest/ ಕಾಂಗ್ರೆಸ್‌ ಕಾರ್ಯಕರ್ತರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

ಮಂಗಳೂರು: ಅಡುಗೆ ಅನಿಲ ಪೂರೈಕೆಯ ಸಮಸ್ಯೆಯನ್ನು ವಿರೋಧಿಸಿ ದ.ಕ ಜಿಲ್ಲಾ ಕಾಂಗ್ರೆಸ್‌ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ಈ ವಿಶೇಷ ರೀತಿಯ ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಒಲೆ ಉರಿಸಿ, ಚಹಾ ತಯಾರಿಸಿ, ಹಪ್ಪಳ ವನ್ನು ಕಾಯಿಸಿ, ಖಾಲಿ ಗ್ಯಾಸ್‌ ಸಿಲಿಂಡರ್‌ಗಳನ್ನು ಪ್ರದರ್ಶಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆಯನ್ನು ನಡೆಸಿದರು.

ಪ್ರತಿಭಟನೆಯ ನೇತೃತ್ವವಹಿಸಿದ ಕೆ.ಪಿ.ಸಿ.ಸಿ. ಕಾರ್ಯದರ್ಶಿ ಐವನ್‌ ಡಿ’ಸೋಜಾ ಮಾತನಾಡಿ ರಾಜ್ಯದ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯು ಗ್ಯಾಸ್‌ ಒದಗಿಸಲು ಶರ್ತಗಳನ್ನು ವಿಧಿಸಿರುವುದು ಮತ್ತು ಈ ಹಿಂದೆ ಗ್ರಾಹಕರು ಕಾನೂನು ಬದ್ಧವಾಗಿ ಗ್ಯಾಸ್‌ ಸಂಪರ್ಕ ಪಡೆದಿದ್ದರೂ ಕೆಲವು ಪ್ರಕರಣಗಳಲ್ಲಿ ಅದನ್ನು ಸಸ್ಪೆಂಡೆಡ್‌/ ವೇರಿಫಿಕೇಶನ್‌ ಇತ್ಯಾದಿ ಷರಾ ಬರೆದು ಗ್ರಾಹಕರಲ್ಲಿ ಒಂದು ರೀತಿಯ ಗೊಂದಲ ಸೃಷ್ಟಿಸಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಸರಕಾರದ ಪ್ರಕಟನೆ ಹೊರ ಬೀಳುವಷ್ಟರಲ್ಲಿ ಕೆಲವು ಮಂದಿ ವಿತರಕರು ಗ್ಯಾಸ್‌ ವಿತರಿಸಲು ಹಿಂದೇಟು ಹಾಕುತ್ತಿರುವುದು ಚಿಂತೆಗೀಡು ಮಾಡಿದೆ ಎಂದು ಐವನ್‌ ಡಿ’ಸೋಜಾ ಹೇಳಿದರು.

ಗ್ಯಾಸ್‌ನಲ್ಲಿ ಅಕ್ರಮ ನಡೆಯುವುದಾದರೆ ವಿತರಕರು ಮತ್ತು ವಾಣಿಜ್ಯ ಬಳಕೆದಾರರ ಬಗ್ಗೆ ತಪಾಸಣೆ ನಡೆಸಿ ಅವರ ವಿರುದ್ಧ ಕ್ರಮ ಜರಗಿಸ ಬೇಕೇ ಹೊರತು ಸಾಮಾನ್ಯ ಗ್ರಾಹಕ ಮೇಲೆ ಅಲ್ಲ ಎಂದ ಅವರು ಡೀಲರ್‌ಗಳು ಬ್ಲಾಕ್ ಮೇಲ್ ತಂತ್ರ ಅನುಸರಿಸಿದರೆ ಡೀಲರ್‌ಗಳ ಅಂಗಡಿಗೆ ದಾಳಿ ನಡೆಸಲಾಗುವುದು ಎಂದು ಐವನ್‌ ಹೇಳಿದರು.

ಪ್ರತಿಭಟನೆಯಲ್ಲಿ ಶಾಸಕ ಯು.ಟಿ. ಖಾದರ್‌, ಮಾಜಿ ಮೇಯರ್‌ಗಳಾದ ಕೆ. ಅಶ್ರಫ್‌ ಮತ್ತು ಎಂ. ಶಶಿಧರ ಹೆಗ್ಡೆ, ಪಕ್ಷದ ನಾಯಕರಾದ ಇಬ್ರಾಹಿಂ ಕೋಡಿಜಾಲ್‌, ಪ್ರವೀಣ್‌ ಚಂದ್ರ ಆಳ್ವ, ಜೆ. ನಾಗೇಂದ್ರ ಕುಮಾರ್‌, ಮಮತಾ ಗಟ್ಟಿ, ಸಂತೋಷ್‌ ಶೆಟ್ಟಿ, ಅಪ್ಪಿ, ಶೋಭಾ ಕೇಶವ ಮುಂತಾದವರು ಮಾತನಾಡಿದರು.

ಮಹಾನಗರ ಪಾಲಿಕೆಯ ಪ್ರತಿಪಕ್ಷ ನಾಯಕ ಲ್ಯಾನ್ಸ್‌ಲೊಟ್‌ ಪಿಂಟೊ, ಕಾರ್ಪೊರೇಟರ್‌ಗಳಾದ ಗ್ರೆಟ್ಟಾ ರೆಬೆಲ್ಲೊ, ಗುಲ್ಜಾರಾ ಬಾನು, ಜೆಸಿಂತಾ ವಿಜಯಾ ಅಲ್ಫ್ರೆಡ್, ವಿಜಯಲಕ್ಷಿ, ಜೆಸಿಂತಾ ಬೊರೋಮಿಯೊ, ಕೆ. ಭಾಸ್ಕರ್‌, ಡಿ.ಕೆ. ಅಶೋಕ್‌ ಕುಮಾರ್‌, ಮಮತಾ ಶೆಣೈ, ಮುಖಂಡರಾದ ಮಿಥುನ್‌ ರೈ, ಮೋಹನ್‌ ಮೆಂಡನ್‌, ಟಿ.ಕೆ. ಸುಧೀರ್‌ ಮುಂತಾದವರು ಉಪಸ್ಥಿತರಿದ್ದರು. ಪ್ರತಿಭಟನೆಯ ಬಳಿಕ ಜಿಲ್ಲಾ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English