ಕುಂದಾಪುರ: ಕಿವಿಗೆ ಮೊಬೈಲ್ ಹೆಡ್ಫೋನ್ ಅಳವಡಿಸಿಕೊಂಡು ರೈಲ್ವೆ ಟ್ರ್ಯಾಕ್ ಮೇಲೆ ನಡೆದು ಹೋಗುತ್ತಿದ್ದ ಯುವಕನಿಗೆ ಡೆಮೊ ರೈಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಕುಂದಬಾರಂದಾಡಿ ಸಮೀಪ ನಡೆದಿದೆ.
ಬೆಂಗಳೂರಿನ ನಿವಾಸಿ ಜಗತ್ ಹೆಗ್ಡೆ(23) ಸಾವನ್ನಪ್ಪಿದ ದುರ್ದೈವಿಯಾಗಿದ್ದು, ಜಗತ್ ಕುಟುಂಬ ದೂರದ ಬೆಂಗಳೂರಿನಲ್ಲಿ ನೆಲೆಸಿದೆ. ಈತ ನಿನ್ನೆ ತನ್ನ ಅಜ್ಜಿಯನ್ನು ಬಿಡಲು ಬೆಂಗಳೂರಿನಿಂದ ಕುಂದಬಾರಂದಾಡಿಗೆ ಕಾರಿನಲ್ಲಿ ಬಂದಿದ್ದರು ಎನ್ನಲಾಗಿದೆ.
ನಿನ್ನೆ ಸಂಜೆ ತನ್ನ ಅಜ್ಜಿಯನ್ನು ಮನೆಯಲ್ಲಿ ಬಿಟ್ಟು ರಾತ್ರಿ ಅದೇ ಕಾರಿನಲ್ಲಿ ಬೆಂಗಳೂರಿಗೆ ವಾಪಸ್ಸಾಗುವವರಿದ್ದರು. ಅಷ್ಟರಲ್ಲಿಯೇ ಸ್ವಲ್ಪ ಹೊತ್ತು ಸಮಯ ಕಳೆಯಲು ರೈಲ್ವೆ ಟ್ರ್ಯಾಕ್ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಊರಿಗೆ ಬಂದಾಗಲೆಲ್ಲ ರೈಲ್ವೆ ಟ್ರಾಕ್ ಮೇಲೆ ಸಮಯ ಕಳೆಯುತ್ತಿದ್ದ ಜಗತ್ ಅಜ್ಜಿ ಮನೆಗೆ ಬಂದಾಗಲೆಲ್ಲ ರೈಲ್ವೆ ಟ್ರ್ಯಾಕ್ ಮೇಲೆ ತಿರುಗಾಡುತ್ತಾ ಸಮಯ ಕಳೆದು ಮನೆಗೆ ವಾಪಾಸಾಗುತ್ತಿದ್ದ. ಅದೇ ರೀತಿಯಾಗಿ ನಿನ್ನೆ ಕೂಡ ಜಗತ್ ತೆರಳುವಾಗ ಅಜ್ಜಿ ಹೋಗಬೇಡ ಎಂದು ಹೇಳಿದ್ದರಂತೆ. ಸ್ವಲ್ಪ ಹೊತ್ತಲ್ಲೆ ಮರಳಿ ಬರುವುದಾಗಿ ತನ್ನ ಅಜ್ಜಿಗೆ ಹೇಳಿ ಜಗತ್ ತೆರಳಿದ್ದ ಎನ್ನಲಾಗಿದೆ.
ಜಗತ್ ಕುಟುಂಬ ಬೆಂಗಳೂರಿನಲ್ಲೇ ನೆಲೆಸಿದ್ದು, ಜಗತ್ ಈ ವರ್ಷವಷ್ಟೇ ಇಂಜಿನಿಯರಿಂಗ್ ಪದವಿಯನ್ನು ಮುಗಿಸಿದ್ಧ ಇನ್ನೇನು ಸ್ವಲ್ಪ ಸಮಯದಲ್ಲೇ ಕೆಲಸಕ್ಕೆ ಹಾಜರಾಗಿ ಬದುಕಿನಲ್ಲಿ ನೆಲೆ ಕಂಡುಕೊಳ್ಳುವ ಈ ಸಣ್ಣ ವಯಸ್ಸಿನಲ್ಲಿ ಸಾವನ್ನಪ್ಪಿದ್ದು, ಅವರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಗಂಗೊಳ್ಳಿ ಠಾಣಾಧಿಕಾರಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಜಗತ್ ಮೃತದೇಹವನ್ನು ಕುಂದಾಪುರ ಶವಾಗಾರಕ್ಕೆ ರವಾನಿಸಿದ್ದಾರೆ.
Click this button or press Ctrl+G to toggle between Kannada and English