ಮಂಗಳೂರು: ಬಿಜೆಪಿ ಯುವ ಮೋರ್ಚಾ ವತಿಯಿಂದ ನಗರದ ಸಂಘ ನಿಕೇತನದಲ್ಲಿ ಶುಕ್ರವಾರ ಆಯೋಜಿಸಿದ ಯುವ ಸಂಘರ್ಷ ಆಂದೋಲನವನ್ನು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಪ್ರಭಾರಿ ಪ್ರತಾಪಸಿಂಹ ನಾಯಕ್ ಉದ್ಘಾಟಿಸಿದರು.
ಉದ್ಘಾಟನೆಯ ಬಳಿಕ ಮಾತನಾಡಿದ ಅವರು ಬಿಜೆಪಿ ವಿವಿಧ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಮತ್ತೆಮತ್ತೆ ಎದ್ದುಬಂದಿದೆ, ಸರಕಾರವನ್ನು ಉರುಳಿಸಲು ರಾಜಕೀಯ ವಿರೋಧಿಗಳ ಪ್ರಯತ್ನ ನಿರಂತರ ನಡೆಯುತ್ತಿದೆ ಎಂದರು.
ಕಾರ್ಯಕರ್ತರು ಇನ್ನಷ್ಟು ಪಕ್ಷದ ಬೆಳವಣಿಗೆಯಲ್ಲಿ ಶ್ರಮವಹಿಸುವುದು ಅತ್ಯಗತ್ಯ. ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಅಸ್ತಿತ್ವಕ್ಕೆ ಬಂದ ಬಿಜೆಪಿ ನೇತೃತ್ವದ ಸರಕಾರವನ್ನು ಕಾರ್ಯಕರ್ತರು ಹಾಗೂ ನಾಯಕರು ಜಾಗರೂಕತೆ ಉಳಿಸುವ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟರು.
ದೇಶದ ಪರಿಸ್ಥಿತಿ ಅತ್ಯಂತ ಸಂಕಷ್ಟದ ಕಾಲಘಟ್ಟದಲ್ಲಿದೆ ಭಯೋತ್ಪಾದನೆ, ನಕ್ಸಲ್ ಹೆಸರಿನಲ್ಲಿ ನಡೆಯುತ್ತಿರುವ ರಕ್ತಪಾತ. ಕೇಂದ್ರದ ನಾಯಕರಿಂದಲೇ ಲಕ್ಷಾಂತರ ಕೋಟಿ ರೂ. ಮೊತ್ತದ ಭ್ರಷ್ಟಾಚಾರ. ಇಂತಹ ಸನ್ನಿವೇಶದಲ್ಲಿ ದೇಶದ ಭವಿಷ್ಯದ ದೃಷ್ಟಿಯಿಂದ ಯುವಜನರು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.
ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಡಾ| ಭರತ್ ಶೆಟ್ಟಿ ಅವರು ರಾಜಕೀಯ ಲಾಭಕ್ಕಾಗಿ ಕೇಂದ್ರ ಸರಕಾರ ದೇಶ ವಿರೋಧಿ ಕೆಲಸಗಳಿಗೆ ಕುಮ್ಮಕ್ಕು ನೀಡುತ್ತಿದೆ. ಕೋಮು ಗಲಭೆ ತಡೆ ಮಸೂದೆ ಹೆಸರಿನಲ್ಲಿ ಹಿಂದೂಗಳ ವಿರುದ್ಧ ನಿಯಮ ರೂಪಿಸಲು ಮುಂದಾಗಿವೆ ಎಂದು ಆರೋಪಿಸಿದರು.
ಯುವ ಮೋರ್ಚಾ ದ.ಕ. ಜಿಲ್ಲಾ ಅಧ್ಯಕ್ಷ ಕಿಶೋರ್ ಕುಮಾರ್ ಪುತ್ತೂರು ಅವರು ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ಕೆ. ಪದ್ಮನಾಭ ಕೊಟ್ಟಾರಿ, ಮುಖಂಡರಾದ ಜಗದೀಶ ಅಧಿಕಾರಿ, ವಿಕಾಸ್ ಪುತ್ತೂರು, ಮಹೇಶ್ ತುಪ್ಪೆಕಲ್ಲು, ಮುರಳಿಕೃಷ್ಣ, ಜಗದೀಶ್ ಪುಣಚ್ಚ, ರಾಘವೇಂದ್ರ ರಾವ್, ಆದರ್ಶ ಗೋಕುಲ್, ವಿನಾಯಕ್, ಪ್ರಸಾದ್ ಭಂಡಾರಿ, ರಂಜನ್ ಗೌಡ, ಹೇಮಂತ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English