ಮಂಗಳೂರು: ಜನರ ದಸರಾ ಎಂದೇ ಪ್ರಸಿದ್ಧಿಯಾದ ಮಂಗಳೂರು ದಸರಾ ಸಂಭ್ರಮದಲ್ಲಿ ಕರಾವಳಿ ನಗರಿ ಮಿನುಗುತ್ತಿದೆ. ನಗರದ 8 ಕಿ.ಮೀ. ಪ್ರದೇಶದಲ್ಲಿ ನವರಾತ್ರಿಯ ರಾತ್ರಿಗಳಂತೂ ನಕ್ಷತ್ರಗಳ ಲೋಕ. ಆಕಾಶದಲ್ಲಿ ಮಿನುಗುತ್ತಿರುವ ತಾರೆಗಳೇ ಧರೆಯನ್ನೇ ಸ್ಪರ್ಶಿಸಿವೆಯೇನೋ ಎಂಬಂತೆ 20 ಲಕ್ಷ ವಿದ್ಯುತ್ ಬಲ್ಬ್‌ಗಳು ಇಡೀ ನಗರದ ಅಂದವನ್ನು ಇಮ್ಮಡಿಗೊಳಿಸಿವೆ.
ಕುದ್ರೋಳಿಯ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರ ಮಂಗಳೂರು ದಸರಾದ ಕೇಂದ್ರ ಬಿಂದು ಎಂದೇ ಖ್ಯಾತಿ ಗಳಿಸಿದೆ. ಪ್ರಾರಂಭದಲ್ಲಿ ಬಿ.ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ ಆರಂಭಗೊಂಡ ಈ ದಸರಾ ವರ್ಷದಿಂದ ವರ್ಷಕ್ಕೆ ಜನಾಕರ್ಷಣೆ ಪಡೆಯುತ್ತಲೇ ಬಂದಿದೆ. ಚೌತಿ ಕಳೆಯುತ್ತಿದ್ದಂತೆಯೇ ಮಂಗಳೂರು ದಸರಾದ ಪ್ರಧಾನ ಆಕರ್ಷಣೆಯಾದ ವರ್ಣಮಯ ದೀಪಾಲಂಕಾರದ ತಯಾರಿ ಆರಂಭಗೊಳ್ಳುತ್ತದೆ.
ಅಂದಿನಿಂದ ನೂರಾರು ಕೆಲಸಗಾರರು ವಿದ್ಯುತ್ ದೀಪಗಳ ಮಾಲೆಗಳನ್ನು ಪ್ರಧಾನ ರಸ್ತೆಗಳಲ್ಲಿ ಜೋಡಿಸಲು ಶುರು ಮಾಡುತ್ತಾರೆ. ಆ ಕೆಲಸ ಪೂರ್ಣಗೊಳ್ಳುವುದು ಮಹಾಲಯ ಅಮಾವಾಸ್ಯೆಗೆ. ಮರುದಿನ ನವರಾತ್ರಿ ಆರಂಭಕ್ಕೆ ಮಂಗಳೂರಿನ ‘ಲುಕ್ಕೇ’ ಬದಲಾಗುತ್ತದೆ. ಪಾಲಿಕೆ ಕೂಡಾ ಈ ವೇಳೆ ಕೊಂಚ ಚುರುಕಾಗಿ ಕೆಲಸ ಪ್ರದರ್ಶಿಸುತ್ತದೆ. ಡಿವೈಡರ್‌ಗಳಿಗೆ ಬಣ್ಣ ಸೇರಿದಂತೆ ಇತರೆ ಸ್ವಚ್ಛತೆಗೆ ಆದ್ಯತೆ ನೀಡುತ್ತದೆ.
ಜನಾರ್ದನ ಪೂಜಾರಿ ಅವರ ಮುಂದಾಳತ್ವದಲ್ಲಿ ಈ ದಸರಾ ಮೆರಗು ಪಡೆದಿದ್ದು ಇಲ್ಲಿರುವ ಸಿದ್ಧಿಧಾತ್ರಿ, ಮಹಾಗೌರಿ, ಮಹಾಕಾಳಿ, ಕಾತ್ಯಾಯಿನಿ, ಸ್ಕಂದ ಮಾತಾ, ಆದಿಶಕ್ತಿ, ಚಂದ್ರಘಂಟಿ, ಬ್ರಹ್ಮಚಾರಿಣಿ, ಶೈಲ ಪುತ್ರಿ, ಮಹಾಗೌರಿ ಮತ್ತು ಶೈಲಪುತ್ರಿ ವಿಗ್ರಹದ ಜತೆಗಿರುವ ಹಸುವಿನ ವಿಗ್ರಹಗಳು ಇದೀಗ ಜೀವ ಬಂದು ನಡೆದು ಬಿಡುತ್ತವೇನೋ ಎನ್ನುವಷ್ಟು ಕಲಾಪೂರ್ಣತೆ ಪಡೆದಿವೆ.
ಇಲ್ಲಿಯವರೇ ಆದ ಕಲಾವಿದ ಸುಧೀರ್ ಅವರ ನೇತೃತ್ವದ ತಂಡದಿಂದ ತಯಾರಾದ ಈ ವಿಗ್ರಹಗಳನ್ನು ನವರಾತ್ರಿಯ ಕೊನೆಯ ದಿನ ವಿಸರ್ಜಿಸಲಾಗುತ್ತದೆ. ನವರಾತ್ರಿಗೆ ಒಂದೂವರೆ ತಿಂಗಳಿರುವಾಗಲೇ ಈ ಸಿದ್ಧತೆ ನಡೆದಿರುತ್ತದೆ. ಆ ಬಳಿಕ ಜನಾರ್ದನ ಪೂಜಾರಿಯವರದ್ದು ನಿಯಮಿತ ಭೇಟಿ ಮತ್ತು ಮೇಲುಸ್ತುವಾರಿ ಶುರು. ಮೂರ್ತಿಗಳ ಜತೆ ಕಲಾವಿದನನ್ನೂ ತಿದ್ದುವ ಕೆಲಸ ಅವರು ಮಾಡುತ್ತಾರೆ. ಇದರ ಪರಿಣಾಮ ನವರಾತ್ರಿಯ ದೇವಿಯರು ವರ್ಷದಿಂದ ವರ್ಷಕ್ಕೆ ಹೆಚ್ಚು ಕಲಾ ಸೌಂದರ್ಯದಿಂದ ನಳನಳಿಸುತ್ತಾರೆ. ಧ್ಯಾನ, ರೌದ್ರ, ಶಾಂತ ಮುಖಭಾವದ ಜತೆ ಸ್ನಿಗ್ಧ ಸೌಂದರ್ಯ ಈ ವಿಗ್ರಹಗಳದ್ದು.
ಸಂತ, ಸಮಾಜ ಸುಧಾರಕ ನಾರಾಯಣಗುರುಗಳಿಂದ ಸಂಸ್ಥಾಪಿತವಾದ ಕುದ್ರೋಳಿ ಕ್ಷೇತ್ರ ದಸರಾ ಹಬ್ಬದ ಮೂಲಕ ಹೊಸ ವೈಭವವನ್ನು ಪಡೆದುಕೊಂಡಿದೆ. ಅಲ್ಲದೆ ಪೂಜಾರಿಯವರ ಅನೇಕ ಸುಧಾರಣಾವಾದಿ ಚಟುವಟಿಕೆಗಳಿಗೂ ಈ ಸ್ಥಳ ಇಂಬು ಕೊಟ್ಟಿದೆ. ಅವರಿಲ್ಲಿ ಸಮಾಜ ಹೊರಗಿಟ್ಟವರನ್ನು ಮುಖ್ಯವಾಹಿನಿಗೆ ತಂದಿದ್ದಾರೆ. ಅಪವಿತ್ರ ಎಂದು ಇದ್ದ ಕಲ್ಪನೆಯನ್ನು ತಿದ್ದಲು ಯತ್ನಿಸಿದ್ದಾರೆ. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.
ದೇವಾಲಯ ಪುನರ್ ನಿರ್ಮಾಣ ಮಾಡುವಾಗಲೂ ಎಲ್ಲಾ ಕಡೆಯ ಉತ್ತಮ ಅಂಶಗಳು ಇಲ್ಲಿ ಮೇಳೈಸಬೇಕು ಎಂದಿತ್ತು. ನಾವು ದೇಶದ ಎಲ್ಲಾ ದೇವಸ್ಥಾನಗಳನ್ನು ಸುತ್ತಿದೆವು, ಉತ್ತಮವಾಗಿದ್ದನ್ನು ಇಲ್ಲಿ ಅಳವಡಿಸಿಕೊಂಡೆವು ಎನ್ನುತ್ತಾರೆ ಜನಾರ್ದನ ಪೂಜಾರಿ.
ಒಟ್ಟಿನಲ್ಲಿ ಮಂಗಳೂರು ದಸರಾ ಕರಾವಳಿಯ ಪ್ರವಾಸೋದ್ಯಮಕ್ಕೂ ಕಾಣಿಕೆ ಕೊಡುತ್ತಿದೆ. ಇಲ್ಲಿಯ ದೀಪಾಲಂಕಾರ ನೋಡಲು ದೂರದೂರುಗಳಿಂದ ಜನ ಆಗಮಿಸುತ್ತಾರೆ. ಬೀಚ್ ಸೇರಿದಂತೆ ನಗರದ ಸುತ್ತಮುತ್ತಲಿನ ಸ್ಥಳಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತದೆ. ಕುದ್ರೋಳಿ ದಸರಾಕ್ಕೆ ಸರ್ಕಾರದ ಸಹಾಯಧನ ಇಲ್ಲ. ಇದು ‘ಅಕ್ಷರಶಃ ಜನರ ದಸರಾ’ ಎನ್ನುತ್ತಾರೆ ದೇವಾಲಯ ಆಡಳಿತ ಮಂಡಳಿಯ ಸದಸ್ಯರಾದ ಹರಿಕೃಷ್ಣ ಬಂಟ್ವಾಳ.
Click this button or press Ctrl+G to toggle between Kannada and English