ಮಗನನ್ನು ಮತದಾರರಿಗೆ ಪರಿಚಯಿಸಿದ್ದರಲ್ಲಿ ತಪ್ಪೇನಿದೆ : ಸಿದ್ದರಾಮಯ್ಯ

6:16 PM, Monday, October 10th, 2016
Share
1 Star2 Stars3 Stars4 Stars5 Stars
(No Ratings Yet)
Loading...

cm airport ಮಂಗಳೂರು: ಕಾವೇರಿ ಕಣಿವೆ ವ್ಯಾಪ್ತಿಯ ಜಲಾಶಯಗಳನ್ನು ಪರಿಶೀಲನೆ ನಡೆಸಿರುವ ಕೇಂದ್ರ ತಜ್ಞರ ತಂಡಕ್ಕೆ ರಾಜ್ಯದ ಸಂಕಷ್ಟ ಪರಿಸ್ಥಿತಿ ಅರ್ಥವಾಗಿದ್ದು, ರಾಜ್ಯಕ್ಕೆ ನ್ಯಾಯ ಸಿಗುವ ಭರವಸೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ದ.ಕ. ಜಿಲ್ಲೆಯಲ್ಲಿ ರವಿವಾರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭ ಬಜಪೆ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನದಿ ನೀರು ಬಗ್ಗೆ ಎರಡೂ ರಾಜ್ಯಗಳಲ್ಲಿರುವ ವಸ್ತುಸ್ಥಿತಿ ಅಧ್ಯಯನ ನಡೆಸಲು ಒಂದು ತಜ್ಞರ ತಂಡ ಕಳುಹಿಸುವಂತೆ ನಾವೇ ಕೇಳಿದ್ದು. ಕರ್ನಾಟಕ ಹಾಗೂ ತಮಿಳುನಾಡಿನ ಜಲಾಶಯಗಳಲ್ಲಿ ಎಷ್ಟು ನೀರಿದೆ, ಒಳ ಹಾಗೂ ಹೊರ ಹರಿವು ಪ್ರಮಾಣ ಎಷ್ಟಿದೆ, ಎರಡೂ ರಾಜ್ಯಗಳಲ್ಲಿ ಬಂದಿರುವ ಮಳೆಯ ಪ್ರಮಾಣ ಎಷ್ಟು, ಬೆಳೆಯ ಪರಿಸ್ಥಿತಿ ಹೇಗಿದೆ ಮುಂತಾದ ವಾಸ್ತವಾಂಶಗಳನ್ನು ಪರಿಶೀಲನೆ ನಡೆಸುವಂತೆ ನಾವು ಮಾಡಿಕೊಂಡ ಮನವಿಗೆ ಒಪ್ಪಿ ಸುಪ್ರೀಂಕೋರ್ಟ್‌ ತಜ್ಞರ ತಂಡ ಕಳುಹಿಸಿದೆ. 2 ದಿನಗಳ ಕಾಲ ರಾಜ್ಯದಲ್ಲಿ ಭೂಪ್ರದೇಶ, ಜಲಾಶಯ, ಅಚ್ಚಕಟ್ಟು ಪ್ರದೇಶಗಳ ಪರಿಶೀಲನೆ ನಡೆಸಿದ್ದಾರೆ. ಇನ್ನೆರಡು ದಿನ ತಮಿಳುನಾಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುತ್ತಾರೆ. ಇದರ ಮೇಲೆ ಅ. 18ರಂದು ನ್ಯಾಯಾಲಯ ತನ್ನ ನಿರ್ಧಾರ ಪ್ರಕಟಿಸುತ್ತದೆ. ನಮ್ಮ ಕಷ್ಟ ತಂಡಕ್ಕೆ ಅರ್ಥವಾಗಿದೆ ಎಂಬುದನ್ನು ನಾನು ಕಂಡುಕೊಂಡಿದ್ದೇನೆ ಎಂದರು.

ಮಹಾದಾಯಿ ನದಿನೀರು ಕುರಿತು ಮುಂಬಯಿಯಲ್ಲಿ ಅ. 21ರಂದು ನಡೆಯುವ ಮುಖ್ಯಮಂತ್ರಿ ಸಭೆಯಲ್ಲಿ ಭಾಗವಹಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕಾವೇರಿ ನದಿನೀರು ವಿವಾದವನ್ನು ನ್ಯಾಯಾಧೀಕರಣದ ಹೊರಗೆ ಬಗೆಹರಿಸುವ ನಿಟ್ಟಿನಲ್ಲೂ ಪ್ರಯತ್ನ ನಡೆಸುವಂತೆ ನ್ಯಾಯಾಧೀಶರು ಸಲಹೆ ನೀಡಿದ ಹಿನ್ನೆಲೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳ ಮುಖ್ಯಮಂತ್ರಿ ಸಭೆ ಕರೆಯುವಂತೆ 6 ತಿಂಗಳ ಹಿಂದೆ ನಾನು ಪ್ರಧಾನಿಗೆ ಹಾಗೂ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೆ. ಇದೀಗ ಮಹಾರಾಷ್ಟ್ರದ ಮುಖ್ಯಮಂತ್ರಿ ಫಡ್ನವೀಸ್‌ ಅವರು ಮುಂಬಯಿಯಲ್ಲಿ ಸಭೆ ಕರೆದಿದ್ದಾರೆ ಎಂದರು.

ನನ್ನ ಹಿರಿಯ ಮಗ ನನ್ನ ಕ್ಷೇತ್ರವನ್ನು ನೋಡಿಕೊಳ್ಳುತ್ತಿದ್ದ. ಆತನ ಸಾವಿನ ಬಳಿಕ ಇದನ್ನು ಕಿರಿಯ ಮಗ ಯತೀಂದ್ರನಿಗೆ ವಹಿಸಿದ್ದೇನೆ. ಅದರಂತೆ ಕಳೆದ ವಾರ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭ ಆತನನ್ನು ಕ್ಷೇತ್ರದ ಕಾರ್ಯಕರ್ತರಿಗೆ, ಮತದಾರರಿಗೆ ಪರಿಚಯಿಸಿದ್ದೇನೆ. ಆತನಿಗೆ ರಾಜಕೀಯದಲ್ಲಿ ಅಷ್ಟೇನೂ ಆಸಕ್ತಿ ಇರಲಿಲ್ಲ. ವೃತ್ತಿಯಲ್ಲಿ ವೈದ್ಯ. ಖಾಸಗಿಯಾಗಿ ಪೆಥಾಲಜಿ ಲ್ಯಾಬ್‌ ಇಟ್ಟುಕೊಂಡಿದ್ದಾನೆ. ಆತನನ್ನು ಕ್ಷೇತ್ರದ ಮತದಾರರರಿಗೆ, ಕಾರ್ಯಕರ್ತರಿಗೆ ಪರಿಚಯಿಸಿದರೇ ತಪ್ಪೇನು? ಪರಿಚಯಿಸಬಾರದು ಎಂದು ಯಾವ ಕಾನೂನು ಹೇಳುತ್ತದೆ ? ಎಂದು ಮುಖ್ಯಮಂತ್ರಿ ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ ಮರುಪ್ರಶ್ನಿಸಿದರು. ಡಾ| ಯತಿಂದ್ರ ಅವರು ಅಧಿಕಾರಿಗಳ ಸಭೆ ನಡೆಸಿದ್ದಾರೆ ಎಂಬ ಆರೋಪಗಳ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಅಧಿಕಾರಿಗಳ ಸಭೆ ನಡೆಸಿದ್ದಾನೆ ಎಂದು ಯಾರು ಹೇಳಿದ್ದು, ಅವನಿಗೆ ಅಧಿಕಾರಿಗಳ ಸಭೆ ನಡೆಸಲು ಹೇಗೆ ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದರು. ಅವನೋರ್ವ ವೈದ್ಯ. ಅಷ್ಟು ಕಾಮನ್‌ಸೆನ್ಸ್‌ ಅತನಿಗಿಲ್ಲವೆ ಎಂದರು. ರಾಜ್ಯ ಸರಕಾರದ ಬಜೆಟ್‌ ಎಂದಿನಂತೆ ಮಾರ್ಚ್‌ ಪ್ರಥಮ ವಾರದಲ್ಲೇ ಮಂಡನೆಯಾಗಲಿದೆ ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಸಚಿವ ಯು.ಟಿ. ಖಾದರ್‌, ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ, ಶಾಸಕರಾದ ಅಭಯಚಂದ್ರ, ಜೆ.ಆರ್‌. ಲೋಬೋ, ಮೊದೀನ್‌ ಬಾವಾ, ಮೇಯರ್‌ ಹರಿನಾಥ್‌, ಡಿಸಿಸಿ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್‌, ಮಾಜಿ ಶಾಸಕ ವಿಜಯ ಕುಮಾರ್‌ ಶೆಟ್ಟಿ, ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ, ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ, ಪೊಲೀಸ್‌ ಆಯುಕ್ತ ಚಂದ್ರಶೇಖರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭೂಷಣ್‌ ಗುಲಾಬ್‌ ರಾವ್‌ ಬೋರಸೆ ಮೊದಲಾದವರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English