ಮಂಗಳೂರು: ಸಂಚಾರಿ ಪೊಲೀಸ್ ಅಧಿಕಾರಿಯೊಬ್ಬರು ಯುವಕನ ಮೇಲೆ ಹಲ್ಲೆ ನಡೆಸಿದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಇದೀಗ ವೈರಲ್ ಆಗುತ್ತಿದೆ.
ನವರಾತ್ರಿ ಅಂಗವಾಗಿ ವೆಂಕಟರಮಣ ದೇವಸ್ಥಾನದ ಬಳಿ ನಡೆದ ಶಾರದೋತ್ಸವ ಮೆರವಣಿಗೆಯ ವೇಳೆ ಅತಿರೇಕವಾಗಿ ವರ್ತಿಸಿದ ವ್ಯಕ್ತಿಯೊಬ್ಬನನ್ನು ಸಂಚಾರಿ ಪಶ್ಚಿಮ ವಿಭಾಗದ ಪೇದೆ ಗಜೇಂದ್ರ ಎನ್ನುವವರು ಥಳಿಸಿದ ದೃಶ್ಯಾವಳಿ ಇದೀಗ ಪೊಲೀಸ್ ಕಮೀಷನರ್ ಅವರಿಗೂ ತಲುಪಿದೆ. ಅಲ್ಲದೆ, ಹೆಚ್ಚಿನ ತನಿಖೆಗಾಗಿ ಸಂಚಾರಿ ಎಸಿಪಿ ತಿಲಕ್‌ಚಂದ್ರ ಅವರಿಗೆ ಸೂಚಿಸಿದ್ದಾರೆ.
ರಥಬೀದಿ ಬಳಿ ಶಾರದೋತ್ಸವದಂಗವಾಗಿ ನಡೆದ ಶೋಭಾಯಾತ್ರೆಯ ಸಂದರ್ಭ ಯುವಕರ ಗುಂಪೊಂದು ಹೆಣ್ಣುಮಕ್ಕಳಿಗೆ ಚುಡಾಯಿಸುತ್ತಿತ್ತು. ಇದನ್ನು ಪೇದೆ ಗಜೇಂದ್ರ ಪ್ರಶ್ನಿಸಿದಾಗ ವ್ಯಕ್ತಿಯೊಬ್ಬ ಇದನ್ನೆಲ್ಲಾ ಕೇಳೋದಕ್ಕೆ ನೀನ್ಯಾರೆಂದು ಉಡಾಫೆ ಮಾಡಿದ್ದ. ಮಾತಿಗೆ ಮಾತು ಬೆಳೆದು ಗಜೇಂದ್ರ ಆ ಯುವಕನ ಮೇಲೆ ಹಲ್ಲೆ ನಡೆಸಿದ್ದರು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರು ಉತ್ತರ ಠಾಣೆಯಲ್ಲಿ ಗಜೇಂದ್ರ ಅವರು ದೂರು ನೀಡಿದ್ದರು. ಬಳಿಕ ಸಬ್ಇನ್ಸ್‌ಪೆಕ್ಟರ್ ಮಾತುಕತೆ ಮೂಲಕ ಸಂಧಾನ ಮಾಡಿದ್ದರು. ಈ ಮಧ್ಯೆ ಯುವಕರ ಪರಿಚಯಸ್ಥನೊಬ್ಬ ಹಲ್ಲೆಯ ದೃಶ್ಯವನ್ನು ತನ್ನ ಮೊಬೈಲ್‌ನಲ್ಲಿ ದಾಖಲಿಸಿ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದ. ಇದಾದ ಬಳಿಕ ಪೊಲೀಸ್ ಕಮಿಷನರ್ ಚಂದ್ರಶೇಖರ್ ಅವರು ಎಸಿಪಿ ತಿಲಕ್‌ಚಂದ್ರ ಅವರಿಗೆ ಈ ಬಗ್ಗೆ ತನಿಖೆಗೆ ಸೂಚಿಸಿದ್ದಾರೆ. ತನಿಖೆ ಮುಂದುವರಿದಿದೆ.
Click this button or press Ctrl+G to toggle between Kannada and English