ಮಂಗಳೂರು: ನಗರ ಹೊರವಲಯದ ಪಡೀಲಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇರುವ ಅಡೆತಡೆಯನ್ನು ನಿವಾರಿಸಲು ತ್ವರಿತ ಕ್ರಮ ಕೈಗೊಳ್ಳುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಇಲಾಖೆಗಳ ನೂತನ ಯೋಜನೆಗಳ ಅನುಷ್ಠಾನ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲಾಧಿಕಾರಿ ಕಚೇರಿಗೆ ಪಡೀಲಿನಲ್ಲಿ ಅರಣ್ಯ ಇಲಾಖೆಯ ಜಾಗವನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಇದಕ್ಕೆ ಬೇಕಾದ 40 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ.
ಚೆನ್ನೈನ ಹಸಿರು ಪೀಠಕ್ಕೆ ಪರಿಸರದ ಹೆಸರಿನಲ್ಲಿ ಕೆಲವರು ದೂರು ಸಲ್ಲಿಸಿರುವುದರಿಂದ ಕಾಮಗಾರಿಗೆ ತೊಡಕಾಗಿದೆ. ಸರ್ಕಾರದ ಆಡಳಿತಾತ್ಮಕ ಮಂಜೂರಾತಿ ದೊರಕಿರುವುದರಿಂದ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಆದ್ದರಿಂದ ಅ. 27ರಂದು ಮತ್ತೆ ಪ್ರಕರಣ ವಿಚಾರಣೆಗೆ ಬರಲಿದೆ. ಆಗ ಪ್ರತಿವಾದಿಯಾಗಿ ಹಸಿರು ಪೀಠಕ್ಕೆ ಅರ್ಜಿಯನ್ನು ಸಲ್ಲಿಸುವಂತೆ ಕಾಮಗಾರಿಯನ್ನು ನಿರ್ವಹಿಸಲಿರುವ ಹೌಸಿಂಗ್ ಬೋರ್ಡ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾ ರಂಗ ಮಂದಿರ ನಿರ್ಮಾಣಕ್ಕೆ ಕೇಂದ್ರದ ಬದಲು ರಾಜ್ಯ ಸರ್ಕಾರವೇ ಅನುದಾನ ನೀಡಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರ ಸೂಚನೆಯ ಮೇರೆಗೆ 15 ಕೋಟಿ ಅನುದಾನಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಜಿಲ್ಲಾಡಳಿತ ಇದನ್ನು ಫಾಲೋಅಪ್ ಮಾಡಬೇಕು. ಅನುದಾನ ಬಿಡುಗಡೆಯಾದ ಕೂಡಲೇ ಟೆಂಡರ್ ಪ್ರಕ್ರಿಯೆ ನಡೆಸಬೇಕು. ಈ ಬಗ್ಗೆ ಯಾವುದೇ ಸಮಸ್ಯೆಗಳಿದ್ದರೆ ನನ್ನಲ್ಲಿ ನೇರವಾಗಿ ತಿಳಿಸಬೇಕು ಎಂದರು.
ಪಿಲಿಕುಳದಲ್ಲಿ ಅರ್ಬನ್ ಇಕೋ ಪಾರ್ಕ್ ಮತ್ತು ಆಕ್ವೇರಿಯಂ ರಚನೆಗೆ 18 ಕೋಟಿ ಅಂದಾಜು ಮೊತ್ತಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ಇದರಲ್ಲಿ 5 ಕೋಟಿಯನ್ನು ಪರಿಸರ ಇಲಾಖೆ ನೀಡಿದೆ. ಇನ್ನು ಒಂದು ವಾರದಲ್ಲಿ ತಾಂತ್ರಿಕ ಅನುಮತಿಯನ್ನು ಪಡೆಯುವಂತೆ ಸೂಚಿಸಿದರು.
ಈ ಯೋಜನೆಯ ಕಾರ್ಯಸಾಧ್ಯತಾ ವರದಿ ಸಿದ್ಧಗೊಂಡಿದೆ. ತಾಂತ್ರಿಕ ಸಮಿತಿಯ ಅನುಮೋದನೆ ಸಿಕ್ಕಿದ ಕೂಡಲೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಜೆ.ಪಿ.ಭಂಡಾರಿ ಹೇಳಿದರು. ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಹೊಸ ಬ್ಲಾಕ್ ನಿರ್ಮಾಣಕ್ಕೆ ತಳ ಅಂತಸ್ತಿನ ಕಾಮಗಾರಿ ನಡೆಯುತ್ತಿದೆ. ಮುಂದಿನ ಮಾರ್ಚ್‌ಗೆ ಮೊದಲ ಹಂತದ ಕಾಮಗಾರಿಯನ್ನು ಪೂರ್ಣಗೊಳಿಸುವ ಇರಾದೆ ಇದೆ.
ಸುಮಾರು 15.1 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ನಡೆಯುತ್ತಿದೆ. ಆಸ್ಪತ್ರೆಯ ಸುರಕ್ಷಾ ನಿಯಿಂದ 6.94 ಕೋಟಿ ನೀಡಲಾಗಿದೆ ಎಂದು ಆಸ್ಪತ್ರೆ ಅಕ್ಷಕಿ ಡಾ. ರಾಜೇಶ್ವರಿ ದೇವಿ ಹೇಳಿದರು. ನಗರದ ಎಮ್ಮೆಕೆರೆಯಲ್ಲಿ 5 ಕೋಟಿ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಈಜುಕೊಳದ ಕಾಮಗಾರಿಯನ್ನು ಶೀಘ್ರವೇ ಕೈಗೆತ್ತಿಕೊಳ್ಳುವಂತೆ ಸೂಚಿಸಿದರು.
Click this button or press Ctrl+G to toggle between Kannada and English