ಮಂಗಳೂರು : ಯೆಯ್ಯಾಡಿ ಸಮೀಪದ ಶರ್ಬತ್‌ಕಟ್ಟೆ ಬಳಿ ಇರುವ ಶ್ರೀರಾಮ ಭಜನಾ ಮಂದಿರದ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಬೆಳ್ಳಿ ಮತ್ತು ಚಿನ್ನಾಭರಣ ,ಕಾಣಿಕೆ ಹುಂಡಿಯ ನಗದು ಸೇರಿದಂತೆ ಒಟ್ಟು 2.74 ಲಕ್ಷ ರೂ. ವೌಲ್ಯದ ಸೊತ್ತುಗಳನ್ನು ದೋಚಿದ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ಭಜನಾ ಮಂದಿರದ ಹೊರ ಬಾಗಿಲಿನ ಬೀಗ ಮುರಿದ ಕಳ್ಳರು ಗರ್ಭಗುಡಿಯ ಕಿಟಕಿಯ ಸರಳು ಬಗ್ಗಿಸಿ ಒಳ ನುಗ್ಗಿದ್ದಾರೆ. ರಾಮದೇವರ ಮೂರ್ತಿಗೆ ಅಳವಡಿಸಿದ 2 ಕೆಜಿ ಬೆಳ್ಳಿ ಪ್ರಭಾವಳಿ, ಅರ್ಧ ಕೆಜಿ ತೂಕದ 2 ಬೆಳ್ಳಿ ಪಾದುಕೆ, 20 ಗ್ರಾಂ ತೂಕದ ಬೆಳ್ಳಿ ಟಂಕೆ, 20 ಗ್ರಾಂ ತೂಕದ ಚಿನ್ನದ ಟಂಕೆ, 1 ಕೆಜಿ ಗಣಪತಿ ದೇವರ ಬೆಳ್ಳಿ ಪಾದುಕೆ ಹಾಗೂ 150 ರೂ. ಕಳವು ಮಾಡಿದ್ದಾರೆ. ಶನಿವಾರ ರಾತ್ರಿ ಅಥವಾ ರವಿವಾರ ಬೆಳಗಿನ ಜಾವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಜನಾ ಮಂದಿರದಲ್ಲಿ ನಿತ್ಯ ಪೂಜೆ ಮತ್ತು ಭಜನೆ ನಡೆಯುತ್ತಿದ್ದು, ಶನಿವಾರ ರಾತ್ರಿ 10.30 ರ ವರೆಗೆ ಭಜನಾ ಮಂದಿರದಲ್ಲಿ ಜನರಿದ್ದರು, ಬೆಳಗ್ಗೆ 8 ಗಂಟೆ ವೇಳೆಗೆ ಭಜನಾ ಮಂದಿರದ ಆಡಳಿತ ಮಂಡಳಿ ಸದಸ್ಯ ಜಯರಾಮ ಅವರು ಬಾಗಿಲು ತೆರೆಯಲು ಬಂದಾಗ ಕಳ್ಳತನ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಬಂಧನಕ್ಕೆ ಶೋಧ ನಡೆಸಿದ್ದಾರೆ.
Click this button or press Ctrl+G to toggle between Kannada and English