ಮಂಗಳೂರು: ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಸದಸ್ಯರು ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ಅವರ ನೇತೃತ್ವದಲ್ಲಿ ಮಿನಿ ವಿಧಾನಸೌಧದ ಒಳಗಿರುವ ಎಲ್ಲಾ ಸರ್ಕಾರಿ ಕಚೇರಿಗೆಳಿಗೆ ಭೇಟಿ ನೀಡಿ ಭ್ರಷ್ಟಾಚಾರದ ಕುರಿತು ಜಾಗೃತಿ ಮೂಡಿಸಿದರು.
ಅಧಿಕಾರಿಗಳ ಕರ್ತವ್ಯ ನಿರ್ವಹಣೆಯ ಕುರಿತು ಮಾಹಿತಿ ಸಂಗ್ರಹಿಸಿದರು. ಅಧಿಕಾರಿಗಳ ಮೇಜಿನ ಮುಂಭಾಗ ನಾಮಫಲಕ ಇಡಬೇಕು, ಸಿಬ್ಬಂದಿ ಗುರುತಿನ ಚೀಟಿ ಧರಿಸಬೇಕು, ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ನೀಡಬೇಕು, ಯಾವುದೇ ಕೆಲಸ ಮಾಡಿಕೊಡಲು ವಿಳಂಬ ಮಾಡಬಾರದು ಎಂಬ ನಿಯಮ ಪಾಲನೆಯ ಬಗ್ಗೆ ತಿಳಿಹೇಳಿದರು.
ಉಪ ತಹಸೀಲ್ದಾರ್ ಮುಂಭಾಗ ನಾಮಫಲಕ ಇಲ್ಲದ ಕಾರಣ ನಾಮಫಲಕ ಹಾಕಲು ಹಣದ ಕೊರತೆ ಇದೆಯೇ ಎಂದು ಪ್ರಶ್ನಿಸಿದ ರವಿಕೃಷ್ಣ ರೆಡ್ಡಿ, ಸ್ಥಳದಲ್ಲೇ ಚಂದಾ ಸಂಗ್ರಹಿಸಿ ಉಪ ತಹಸೀಲ್ದಾರ್ ಅವರ ಮೇಜಿನ ಮೇಲೆ ಹಣ ಇಟ್ಟರು. ಬಳಿಕ ಕಚೇರಿ ಸಿಬ್ಬಂದಿ ಉಪ ತಹಸೀಲ್ದಾರ್ ಅವರ ಹೆಸರು ಮುದ್ರಿಸಿ ಗೋಡೆಗೆ ಅಂಟಿಸಿದರು.
ಈ ಸಂದರ್ಭ ಹಲವಾರು ಮಂದಿ ಪ್ರಮಾಣಪತ್ರ ಸೇರಿದಂತೆ ತಮ್ಮ ಕೆಲಸ ಮಾಡಿಕೊಡಲು ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದೂರಿದರು. ಬಳಿಕ ಮಂಗಳೂರು ಸಹಾಯಕ ಆಯುಕ್ತ ಡಾ. ಅಶೋಕ್ ಅವರನ್ನು ತಂಡ ಭೇಟಿ ಮಾಡಿತು. ಈ ಸಂದರ್ಭ ಮಾತನಾಡಿದ ಅಶೋಕ್, ಮುಂದಿನ ಮೂರು ದಿನಗಳ ಒಳಗೆ ಮಿನಿ ವಿಧಾನಸೌಧದ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗಳ ಮೇಜಿನಲ್ಲಿ ಅವರ ಹೆಸರು ಮತ್ತು ಹುದ್ದೆ ಬರೆದ ಫಲಕ ಇಡಲಾಗುವುದು. ಗುರುತುಚೀಟಿ ಹಾಕಿಕೊಳ್ಳುವಂತೆ ಸೂಚಿಸಲಾಗುವುದು. ಸಾರ್ವಜನಿಕರಿಗೆ ಮಾಹಿತಿ ನೀಡಲು, ಕೆಲಸ ವಿಳಂಬವಾಗದಂತೆ ನೋಡಿಕೊಳ್ಳಲು ಸಮರ್ಪಕ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
Click this button or press Ctrl+G to toggle between Kannada and English