ಮಂಗಳೂರು: ರಾತ್ರಿ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿರುವ ಘಟನೆ ಬಂಟ್ವಾಳದ ಬೋಗೋಡಿಯ ಎಸ್.ಎಂ ನಗರ ಎಂಬಲ್ಲಿ ನಡೆದಿದೆ.
ಅಬೂಬಕ್ಕರ್ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ರಾತ್ರಿ ವೇಳೆ ಮನೆ ಮಂದಿಯೆಲ್ಲಾ ಮಲಗಿದ ಮೇಲೆ ಮನೆಗೆ ನುಗ್ಗಿದ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ. ಮುಂಜಾನೆ ಎದ್ದಾಗಲೇ ಮನೆಯವರಿಗೆ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದೆ.
ಮನೆಯ ಮೇಲಿನ ಮಹಡಿಯಲ್ಲಿ ಹೊಸ ಕಿಚನ್ ರೂಂ ನಿರ್ಮಾಣದ ಕಾಮಗಾರಿ ಕೆಲ ದಿನಗಳಿಂದ ನಡೆಯುತ್ತಿದ್ದು, ಮೂಡಬಿದ್ರೆಯ ಮುಹಮ್ಮದ್ ಹಾಗೂ ಸಿದ್ದಕಟ್ಟೆಯ ಯುವಕನೋರ್ವ ಕಾಮಗಾರಿ ನಿರ್ವಹಿಸುತ್ತಿದ್ದರು. ಇವರು ಮನೆಯ ಹೊರಭಾಗದಲ್ಲಿ ಏಣಿಯೊಂದನ್ನು ಹಾಗೆಯೇ ಬಿಟ್ಟು ತೆರಳಿದ್ದರು ಎನ್ನಲಾಗಿದ್ದು, ಇದುವೇ ಕಳ್ಳರು ಮಹಡಿ ಮೇಲೇರಲು ಸಹಕಾರಿಯಾಗಿದೆ.
ಇನ್ನು ಮನೆಯ ಮೇಲಿನ ಮಹಡಿಯಿಂದ ಒಳಭಾಗದಕ್ಕೆ ಬರುವ ಬಾಗಿಲಿನ ಚಿಲಕ ಭದ್ರಪಡಿಸಿರಲಿಲ್ಲ ಇದು ಕೂಡಾ ಕಳ್ಳರ ಪಾಲಿಗೆ ವರದಾನವಾಗಿ ಪರಿಣಮಿಸಿದೆ. ಏಣಿ ಮೂಲಕ ಮನೆಯ ಮಹಡಿಯ ಮೇಲೇರಿ ಬಾಗಿಲ ಮೂಲಕ ಒಳ ನುಗ್ಗಿದ ಕಳ್ಳರ ತಂಡ ನೇರವಾಗಿ ಅಬೂಬಕ್ಕರ್ ಅವರ ಕೋಣೆಯನ್ನು ಪ್ರವೇಶಿಸಿ ಅಲ್ಲಿದ್ದ ಕಪಾಟನ್ನು ಸಂಪೂರ್ಣವಾಗಿ ಜಾಲಾಡಿ ಅದರಲ್ಲಿಟ್ಟಿದ್ದ ಚಿನ್ನಾಭರಣ, ನಗದು ಹಾಗೂ ಮೊಬೈಲ್ ಎಗರಿಸಿ ಪರಾರಿಯಾಗಿದ್ದಾರೆ.
ಬಂಟ್ವಾಳ ನಗರ ಠಾಣಾ ಎಸ್‌ಐ ನಂದಕುಮಾರ್, ಕ್ರೈಂ ಎಸ್‌ಐ ಗಂಗಾಧರಪ್ಪ ಸಹಿತ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಯಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Click this button or press Ctrl+G to toggle between Kannada and English