ಟ್ರಾವೆಲ್ ಏಜೆನ್ಸಿಗೆ ಪೊಲೀಸ್ ದಾಳಿ: ನಕಲಿ ದಾಖಲೆಪತ್ರ, ಮೊಹರು, ಕಂಪ್ಯೂಟರ್ಗಳು, 1.32 ಲಕ್ಷ ರೂ. ವಶ

11:12 AM, Wednesday, November 9th, 2016
Share
1 Star2 Stars3 Stars4 Stars5 Stars
(No Ratings Yet)
Loading...

travel agencyಉಪ್ಪಳ: ಉಪ್ಪಳದಲ್ಲಿ ಕಾರ್ಯಾಚರಿಸುತ್ತಿರುವ ಖಾಸಗೀ ಟ್ರಾವೆಲ್ ಏಜೆನ್ಸಿ ಸಂಸ್ಥೆಗೆ ಪೊಲೀಸರು ನಡೆಸಿದ ದಾಳಿಯಲ್ಲಿ ಹಲವು ಅನಧಿಕೃತ ದಾಖಲೆಪತ್ರ, ಕಂಪ್ಯೂಟರ್‌ಗಳು ಹಾಗೂ ಮೊಹರುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಸಂಬಂಧ ಓರ್ವನ್ನು ಕಸ್ಟಡಿಗೆ ತೆಗೆದು ವಿಚಾರಣೆ ನಡೆಸಲಾಗುತ್ತಿದೆ.

ಸೋಮವಾರ ಸಂಜೆ 5.30ಕ್ಕೆ ಆರಂಭಗೊಂಡ ಪೊಲೀಸ್ ಕಾರ್ಯಾಚರಣೆ ರಾತ್ರಿ 8.30ರ ವರೆಗೆ ಮುಂದುವರಿದಿದೆ. ಮಂಗಳವಾರ ಕೂಡಾ ತಪಾಸಣೆ ಅಗತ್ಯವುಳ್ಳ ಹಿನ್ನೆಲೆಯಲ್ಲಿ ಸಂಸ್ಥೆಗೆ ಮೊಹರುಗೊಳಿಸಿ ಪೊಲೀಸ್ ಕಾವಲು ಏರ್ಪಡಿಸಲಾಗಿದೆ.

ಉಪ್ಪಳ ಮೆಹಬೂಬ್ ಪೆಟ್ರೋಲ್ ಬಂಕ್ ಸಮೀಪ ಪೆರಿಂಗಡಿ ನಿವಾಸಿ ಅನ್ಸಾರ್ ಎಂಬಾತನ ಮಾಲಕತ್ವದಲ್ಲಿ ಕಳೆದ ಐದು ವರ್ಷ ಗಳಿಂದ ಈ ಸಂಸ್ಥೆ ಕಾರ್ಯಾಚರಿಸುತ್ತಿದೆ. ಸಂಸ್ಥೆಯನ್ನು ಕೇಂದ್ರೀಕರಿಸಿ ಹಲವು ರೀತಿಯ ಕಾನೂನು ವಿರೋಧಿ ಚಟುವಟಿಕೆ ನಡೆಸುತ್ತಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠರಿಗೆ ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಸಂಸ್ಥೆ ಮೇಲೆ ಕಳೆದ ಒಂದು ತಿಂಗಳಿಂದ ಪೊಲೀಸರು ನಿಗಾ ವಹಿಸುತ್ತಿದ್ದರು.

ಸೋಮವಾರ ಸಂಜೆ ಕುಂಬಳೆ ಸಿ.ಐ ವಿ.ವಿ. ಮನೋಜ್, ಮಂಜೇಶ್ವರ ಎಸ್.ಐ ಪಿ. ಪ್ರಮೋದ್, ಜಿಲ್ಲಾ ಪೊಲೀಸಧಿಕಾರಿಯ ಪ್ರತ್ಯೇಕ ಸ್ಕ್ವಾಡ್, ಸೈಬರ್ ಸೆಲ್ ತಂಡ ಮೊದಲಾದವರ ನೇತೃತ್ವದಲ್ಲಿ ಭಾರೀ ಪೊಲೀಸ್ ತಂಡ ಸಂಸ್ಥೆಗೆ ದಿಢೀರ್ ದಾಳಿ ನಡೆಸಿ ತಪಾಸಣೆ ಆರಂಭಿಸಿದೆ. ತಪಾಸಣೆ ವೇಳೆ 70 ಪಾಸ್ ಪೋರ್ಟ್‌ಗಳು, ಪೆನ್ ಡ್ರೈವ್‌ಗಳು, ಮೂರು ಕಂಪ್ಯೂಟರ್‌ಗಳು, ಹಾರ್ಡ್‌ಡಿಸ್ಕ್‌ಗಳು, ಹಲವಾರು ಬ್ಯಾಂಕ್ ಪಾಸ್ ಪುಸ್ತಕಗಳು, ಲೆಟರ್‌ಹೆಡ್‌ಗಳು, ಮೊಹರುಗಳು, ವಿವಿಧ ಶಾಲಾ ಕಾಲೇಜುಗಳ ಲೆಟರ್ ಹೆಡ್‌ಗಳು, ಎಕ್ಸ್‌ಪೀರಿಯನ್ಸ್ ಸರ್ಟಿಫಿಕೇಟ್‌ಗಳು, ವಿವಿಧ ಸಂಸ್ಥೆಗಳ ಹೆಸರಲ್ಲಿರುವ ಸ್ಲಿಪ್‌ಗಳು, ಹಡಗಿನಲ್ಲಿ ಉದ್ಯೋಗಕ್ಕೆ ಅಗತ್ಯವುಳ್ಳ ದಾಖಲೆಪತ್ರಗಳು, ಹಲವು ಸರಕಾರಿ ಸಂಸ್ಥೆಗಳ ಲೆಟರ್ ಹೆಡ್‌ಗಳನ್ನು ಪೊಲೀಸರು ವಶಕ್ಕೆ ತೆಗೆದಿದ್ದಾರೆ. ಇವುಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಸಂಸ್ಥೆಯಿಂದ 1,32,500 ರೂ. ಗಳನ್ನು ಪತ್ತೆಹಚ್ಚಿ ವಶಪಡಿಸಲಾಗಿದೆ.

ಇದೇವೇಳೆ ದಾಳಿ ವಿಷಯ ಅರಿತು ಸಂಸ್ಥೆಯ ಮಾಲಕ ತಲೆಮರೆಸಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ನಕಲಿ ದಾಖಲೆಪತ್ರಗಳನ್ನು ಬಳಸಿ ಪಾಸ್‌ಪೋರ್ಟ್, ಡ್ರೈವಿಂಗ್ ಲೈಸನ್ಸ್, ಮರಳು ಪಾಸ್ ಮೊದಲಾದವುಗಳನ್ನು ವ್ಯಾಪಕವಾಗಿ ತಯಾರಿಸಿದುದಕ್ಕೆ ಸಂಬಂಧಿಸಿ ಇತ್ತೀಚೆಗೆ ಮಂಜೇಶ್ವರ ಪೊಲೀಸರು ಹಲವು ದೂರುಗಳನ್ನು ದಾಖಲಿಸಿಕೊಂಡಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English