ಮಂಗಳೂರು: ತನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿರಂತರ ನಡೆಯುತ್ತಿರುವ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ವಿರುದ್ಧ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು. ಟಿ. ಖಾದರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಹಿತಕರ ಘಟನೆಯಲ್ಲಿ ನನ್ನ ಪಾತ್ರವಿದೆ ಎಂದು ಬಿಜೆಪಿ ನಾಯಕ, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಆರೋಪಿಸಿದ್ದಾರೆ. ಆರೋಪದಲ್ಲಿ ಹುರುಳಿಲ್ಲ. ಅಹಿತಕರ ಘಟನೆ ಯಾರೇ ಮಾಡಿದರೂ ಖಂಡನೀಯ.
ಶಾಂತಿಯನ್ನು ಬಯಸುವ ಯಾವ ನಾಗರಿಕನೂ ಇಂತಹ ಕೃತ್ಯದಲ್ಲಿ ಪಾಲ್ಗೊಳ್ಳಲಾರ. ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುವ ಅಹಿತಕರ ಘಟನೆಯ ಬಗ್ಗೆ ಸೂಕ್ತ ತನಿಖೆಗೆ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಯಾವುದೇ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆಯಲ್ಲಿ ತನ್ನ ಹಸ್ತಕ್ಷೇಪವಿಲ್ಲ. ಪ್ರಕರಣದ ತನಿಖೆ ನಡೆಸಲು ಇಲಾಖೆ ಸರ್ವ ಸ್ವತಂತ್ರವಾಗಿದೆ ಎಂದು ಹೇಳಿದರು.
ರಾಜ್ಯದ ಯಾವುದೇ ಗೋದಾಮುಗಳಲ್ಲಿ ಯಾವುದೇ ಆಹಾರ ಸಾಮಗ್ರಿಗಳನ್ನು ಅಕ್ರಮವಾಗಿ ದಾಸ್ತಾನಿಟ್ಟರೆ ಸೂಕ್ತ ಕ್ರಮ ಜರಗಿಸಲಾಗುವುದು ಎಂದು ಎಚ್ಚರಿಸಿದ ಅವರು, ರಾಷ್ಟ್ರಾದ್ಯಂತ 500 ಮತ್ತು 1,000 ರೂ. ನೋಟು ಅಮಾನ್ಯಗೊಂಡ ಬಳಿಕ ಉದ್ಭವಿಸಿರುವ ಚಿಲ್ಲರೆ ಸಮಸ್ಯೆಯ ನಡುವೆ ಆಹಾರಗಳನ್ನು ದಾಸ್ತಾನುಗೈದು ಗೊಂದಲ ಸೃಷ್ಟಿಸುವ ಪ್ರಕ್ರಿಯೆ ರಾಜ್ಯದೆಲ್ಲೆಡೆ ನಡೆಯುತ್ತಿದೆ ಎಂದರು.
ರಖಂ ಮಳಿಗೆಗಳಲ್ಲಿ 1 ಸಾವಿರ ಟನ್‌ಗಿಂತ ಮತ್ತು ಚಿಲ್ಲರೆ ಅಂಗಡಿಗಳಲ್ಲಿ 100 ಟನ್‌ಗಿಂತ ಅಧಿಕ ಆಹಾರ ಸಾಮಗ್ರಿ ದಾಸ್ತಾನು ಇಡುವಂತಿಲ್ಲ. ಈ ಬಗ್ಗೆ ಈಗಾಗಲೇ ಸೂಚನೆ ನೀಡಲಾಗಿದೆ. ಅದನ್ನು ಮೀರಿ ಅಕ್ರಮವಾಗಿ ದಾಸ್ತಾನಿಟ್ಟು ಕೃತಕವಾಗಿ ಆಹಾರ ಅಭಾವ ಸೃಷ್ಟಿಸಿದರೆ ದಾಳಿ ನಡೆಸಲು ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಒಂದು ವೇಳೆ ಇಂತಹ ದಾಸ್ತಾನುಗಳು ಕಂಡುಬಂದರೆ ಕಠಿಣ ಕ್ರಮ ಜರಗಿಸಲಾಗುವುದು ಎಂದು ತಿಳಿಸಿದರು.
ಜನಸಾಮಾನ್ಯರಿಗೆ ಚಿಲ್ಲರೆ ಸಮಸ್ಯೆಯಾಗಿದ್ದರೂ ಕೂಡ ರಾಜ್ಯದ ಎಲ್ಲೂ ಕೂಡಾ ಆಹಾರದ ಕೊರತೆ ಆಗಿಲ್ಲ. ಎಣ್ಣೆ, ಉಪ್ಪು ಲಭ್ಯವಿದೆ. ಆಹಾರ ಕೊರತೆಯಾಗಲಿದೆ ಎಂಬುದು ಜನರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನವಾಗಿದೆ ಎಂದರು.
Click this button or press Ctrl+G to toggle between Kannada and English