ಮಂಗಳೂರು: ಪಿಲಿಕುಳ ನಿಸರ್ಗಧಾಮ ಈಗ ಮತ್ತಷ್ಟು ಆಕರ್ಷಣೀಯವಾಗಿದೆ. ಇಲ್ಲಿನ ಡಾ| ಶಿವರಾಮ ಕಾರಂತ ಜೈವಿಕ ಉದ್ಯಾನವನದ ಕಾಳಿಂಗ ಸರ್ಪ ಸಂತಾನೋತ್ಪತ್ತಿ ಕೇಂದ್ರದಲ್ಲಿ ಎರಡೂವರೆ ತಿಂಗಳ ಹಿಂದೆ ಮೂರು ಕಾಳಿಂಗ ಸರ್ಪಗಳು ಇಟ್ಟಿದ್ದ 82 ಮೊಟ್ಟೆಗಳ ಪೈಕಿ ಇದೀಗ 35ಕ್ಕಿಂತಲೂ ಅಧಿಕ ಮರಿಗಳು ಹೊರ ಬಂದಿದ್ದು ಉದ್ಯಾವವನದ ಸರ್ಪ ಸಂತತಿ ವೃದ್ದಿಸಿದೆ.
ಪಿಲಿಕುಳದಲ್ಲಿ ಒಟ್ಟು 14 ಕಾಳಿಂಗ ಸರ್ಪಗಳಲ್ಲಿ 9 ಗಂಡು, 5 ಹೆಣ್ಣು. ನಾಗಮಣಿ, ನಾಗವೇಣಿ, ರಾಣಿ ಇವು ಮೊಟ್ಟೆ ಇಟ್ಟಿರುವ ಸರ್ಪಗಳು. ಈ ಪೈಕಿ ನಾಗಿಣಿ ಗೂಡು ಕಟ್ಟಿ ಕುಳಿತದ್ದು ಬಿಟ್ಟರೆ ಮೊಟ್ಟೆ ಇಟ್ಟಿಲ್ಲ. ಇದು ಯಾಕೆ ಮೊಟ್ಟೆ ಇಟ್ಟಿಲ್ಲ ಎಂಬ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಇವುಗಳೊಂದಿಗಿದ್ದ ಗಂಡು ಹಾವುಗಳೆಂದರೆ ಸುಮಾರು 7ರಿಂದ 10 ವರ್ಷದ ನಾಗೇಂದ್ರ, ನಾಗರಾಜ, ರಾಜ. ವಿಶೇಷವೆಂದರೆ ವಿಶ್ವದ ಬೇರೆ ಯಾವುದೇ ಸಂತಾನೋತ್ಪತ್ತಿ ಕೇಂದ್ರಗಳಲ್ಲಿ ಕಾಳಿಂಗ ಸರ್ಪಗಳು ಮೊಟ್ಟೆ ಇಟ್ಟು ಮರಿ ಮಾಡಿರುವ ದಾಖಲೆಗಳಿಲ್ಲ. ಈ ಮೂಲಕ ಪಿಲಿಕುಳದಲ್ಲಿ ಕಳೆದ ಮೂರು ವರ್ಷಗಳಿಂದ ನಡೆಯುತ್ತಿದ್ದ ಸಂಶೋಧನೆ ಫಲ ನೀಡಿದೆ.
ಪಿಲಿಕುಳದಲ್ಲಿ ಕಾಳಿಂಗ ಸರ್ಪಗಳ ಸಂತಾನೋತ್ಪತ್ತಿಗಾಗಿ ಪ್ರತ್ಯೇಕ ಕೇಂದ್ರವನ್ನು ತೆರೆದು ಕೃತಕವಾಗಿ ಬಂಡೆ, ಪೊದೆಗಳು, ಮರಗಿಡಗಳನ್ನು ಅಳವಡಿಸಿ ಕಾಡಿನ ವಾತಾವರಣವನ್ನು ಸೃಷ್ಟಿಸಲಾಗಿದೆ. ಮೊಟ್ಟೆ ಇಡುವ ದಿನ ಸಮೀಪಿಸುತ್ತಿದ್ದಂತೆ ಮರದ ತೊಗಟೆ, ಹುಲ್ಲು ಇತ್ಯಾದಿಗಳಿಂದ ಹಾವುಗಳು ಗೂಡು ಕಟ್ಟಿ ಮೊಟ್ಟೆ ಇಡುತ್ತವೆ. ಕಾಳಿಂಗ ಸರ್ಪಗಳು ಒಂದು ಬಾರಿಗೆ ಸುಮಾರು 20ರಿಂದ 40 ಮೊಟ್ಟೆಗಳನ್ನು ಇಡುತ್ತವೆ.
ಗಂಡು ಹಾವು ಹೆಣ್ಣಿನ ಜತೆಯಲ್ಲೇ ಇದ್ದುಕೊಂಡು ಮೊಟ್ಟೆಗಳನ್ನು ಕಾಯುತ್ತದೆ. ಈ ಸಂದರ್ಭ ಎರಡು ಸರ್ಪಗಳೂ ಆಹಾರ ತೆಗೆದುಕೊಳ್ಳುವುದಿಲ್ಲ. ಮೊಟ್ಟೆ ಒಡೆದು ಮರಿ ಹೊರ ಬರಲು ಆರಂಭವಾಗುತ್ತಿದ್ದಂತೆ ಗಂಡು ಹಾಗೂ ಹೆಣ್ಣು ಸರ್ಪಗಳನ್ನು ಗೂಡಿನಿಂದ ಪ್ರತ್ಯೇಕಿಸಲಾಗುತ್ತದೆ. ಯಾಕೆಂದರೆ ಅವು ಹಸಿವಿನಿಂದ ಮರಿಗಳನ್ನು ತಿನ್ನುವ ಸಾಧ್ಯತೆ ಇದೆ.
ಪಿಲಿಕುಳ ಜೈವಿಕ ಉದ್ಯಾನವನದಲ್ಲಿರುವ ಕಾಳಿಂಗ ಸರ್ಪಗಳಿಗೆ ಇದೀಗ ಮೈಕ್ರೋ ಚಿಪ್ ಅಳವಡಿಸುವ ಕಾರ್ಯ ನಡೆಯುತ್ತಿದೆ. ಗುಂಪು ಗುಂಪಾಗಿರುವ ಸಂದರ್ಭ ಹಾವುಗಳನ್ನು ಗುರುತಿಸಲು ಇದರಿಂದ ಸಾಧ್ಯವಾಗುತ್ತದೆ. ಅವುಗಳ ಕುತ್ತಿಗೆಯ ಭಾಗಕ್ಕೆ ಮೈಕ್ರೋ ಚಿಪ್ ಅಳವಡಿಸಲಾಗುತ್ತದೆ. ಅದರಲ್ಲಿ ನಂಬರ್‌ಗಳಿದ್ದು ಅದನ್ನು ದಾಖಲು ಮಾಡಿಟ್ಟುಕೊಂಡು ಮೈಕ್ರೋಚಿಪ್ ರೀಡರ್‌ನ್ನು ಆ ಹಾವುಗಳ ಬಳಿಗೆ ಕೊಂಡೊಯ್ದಾಗ ಅದರಲ್ಲಿ ಹಾವುಗಳ ಹೆಸರು, ನಂಬರ್ ಮೂಡುತ್ತದೆ. ಈ ಮೂಲಕ ಹಾವುಗಳನ್ನು ಗುರುತು ಹಿಡಿಯಲಾಗುತ್ತದೆ. ಇಲ್ಲಿನ ಹುಲಿಗಳಿಗೂ ಈ ಚಿಪ್ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಒಟ್ಟಿನಲ್ಲಿ ಪಿಲಿಕುಳ ಹಲವು ಪ್ರಯೋಗಗಳ ಮೂಲಕ ದೇಶದಲ್ಲಿ ಅತ್ಯುತ್ತಮ ಪ್ರಾಣಿ ಸಂಗ್ರಹಾಲಯವಾಗಿ ಗುರುತಿಸಿಕೊಳ್ಳುತ್ತಿದೆ.
ಈ ಕುರಿತು ಮಾತನಾಡಿದ ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ ಭಂಡಾರಿಯವರು ಕಾಳಿಂಗ ಸರ್ಪಗಳು ಅರಣ್ಯಗಳಲ್ಲಿ ಮೊಟ್ಟೆ ಇಟ್ಟು ಮರಿ ಮಾಡುವುದು ಸಹಜ ಪ್ರಕ್ರಿಯೆ. ಕೃತಕವಾಗಿ ನಿರ್ಮಿಸಲಾದ ಸಂತಾನೋತ್ಪತ್ತಿ ಕೇಂದ್ರದಲ್ಲಿ ಮೊಟ್ಟೆಗಳನ್ನಿಟ್ಟು ಮರಿ ಮಾಡಿರುವುದು ಇದೇ ಮೊದಲು. ಕೆಲವು ವರ್ಷಗಳಿಂದ ಈ ನಿಟ್ಟಿನಲ್ಲಿ ನಡೆಸುತ್ತಿದ್ದ ಸಂಶೋಧನೆ ಯಶಸ್ಸು ಗಳಿಸಿದೆ ಎಂದಿದ್ದಾರೆ. ಭಂಡಾರಿ ಅವರ ಜೊತೆ ವೈಜ್ಞಾನಿಕ ಅಧಿಕಾರಿ ವಿಕ್ರಮ್, ಅಸಿಸ್ಟೆಂಟ್ ಕ್ಯುರೇಟರ್ ರೋಶನ್ ಹಾಗೂ ಉರಗ ಪರಿಚಾರಕರಾದ ದಿನೇಶ್ ಮತ್ತು ಅಶೋಕ್ ಸಂಶೋಧನೆಗೆ ಸಹಕರಿಸಿದ್ದಾರೆ.
ಸರ್ಪ ಸಂತಾನೋತ್ಪತ್ತಿಯಾಗುವ ಮೂಲಕ ಅಪರೂಪದ ಸಾಧನೆ ಮಾಡಿದಂತಾಗಿದೆ ಎಂದು ನಿಸರ್ಗಧಾಮದ ಕಾರ್ಯಕಾರಿ ನಿರ್ವಾಹಕ ನಿರ್ದೇಶಕ ಜೆ.ಆರ್. ಲೋಬೋ ಹರ್ಷ ವ್ಯಕ್ತಪಡಿಸಿದ್ದಾರೆ.’ ಪಿಲಿಕುಳದಲ್ಲಿ ಕಳೆದ ಹಲವು ವರ್ಷಗಳಿಂದ ಇತರ ಪ್ರಾಣಿಗಳ ಸಂತಾನೋತ್ಪತ್ತಿಯಾಗುತ್ತಿದೆ ಎಂದು ಅವರು ಹೇಳಿದರು.
Click this button or press Ctrl+G to toggle between Kannada and English