ಮಂಗಳೂರು: ಈ ಬಾರಿ ಮುಂಗಾರು ಕೈಕೊಟ್ಟಿದೆ. ಚಳಿಗಾಲದ ಹೆಸರೇ ಇಲ್ಲದಂತೆ ಬೇಸಗೆ ಸಮೀಪಿಸುತ್ತಿದೆ. ಇದರೊಂದಿಗೆ ವಿದ್ಯುತ್ ಕಡಿತದ ಬಿಸಿ ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ತಟ್ಟಲಾರಂಬಿಸಿದ್ದು, ಉದ್ಯಮ ಹಾಗೂ ಕೃಷಿ ಚಟುವಟಿಕೆಗಳಿಗೆ ವಿದ್ಯುತ್ ಕೊರತೆ ಕಾಡುತ್ತಿದೆ.
ಮೆಸ್ಕಾಂ ತಿಳಿಸುವ ಪ್ರಕಾರ ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಈಗ ಅಧಿಕೃತ ಲೋಡ್‌ಶೆಡ್ಡಿಂಗ್ ಜಾರಿಯಲ್ಲಿಲ್ಲ. ಆದರೆ, ಅನಧಿಕೃತವಾಗಿ ವಿದ್ಯುತ್ ಕಡಿತ ಮಾತ್ರ ಸಾಮಾನ್ಯವಾಗಿದೆ. ಈಗ ಇದ್ದ ವಿದ್ಯುತ್ ಅರೆಘಳಿಗೆಯಲ್ಲಿಯೇ ಮಾಯವಾಗುತ್ತಿದೆ. ಮತ್ತೆ ಯಾವ ಸಮಯಕ್ಕೆ ಬರುತ್ತದೆ ಎಂಬುದು ಇಲ್ಲಿ ಯಕ್ಷಪ್ರಶ್ನೆ.
ಮಂಗಳೂರು ತಾಲೂಕಿಗೆ ದಿನವೊಂದಕ್ಕೆ ಸರಾಸರಿ 230 ಮೆಗಾ ವ್ಯಾಟ್‌ನಷ್ಟು ವಿದ್ಯುತ್‌ನ ಆವಶ್ಯಕತೆ ಇದೆ. ಆದರೆ ಸದ್ಯಕ್ಕೆ ಇಲ್ಲಿ ಲಭ್ಯತೆ ಇರುವುದು 200ರಿಂದ 210 ಮೆ.ವ್ಯಾ. ಮಾತ್ರ. ಪರಿಣಾಮ ಸುಮಾರು 20ರಿಂದ 30 ಮೆ.ವ್ಯಾಟ್
ನಷ್ಟು ವಿದ್ಯುತ್ ಕೊರತೆ ಎದುರಾಗಿದೆ. ಇದನ್ನು ಸರಿದೂಗಿಸಲು ನಗರ ಹಾಗೂ ಗ್ರಾಮಾಂತರದಲ್ಲಿ ಅನಿರ್ದಿಷ್ಟ ವೇಳೆಯಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಹೀಗಾಗಿ 10 ನಿಮಿಷಕ್ಕೊಮ್ಮೆ, ಅರ್ಧ ತಾಸಿಗೊಮ್ಮೆ ವಿದ್ಯುತ್ ಆಗ ಬಂದು-ಈಗ ಹೋಗುವ ಪರಿಪಾಠ ಇಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ.
ಕಳೆದ ವರ್ಷ ಸುಮಾರು 150ರಿಂದ 160 ಮೆ. ವ್ಯಾಟ್ ವಿದ್ಯುತ್‌ಗೆ ಬೇಡಿಕೆ ಇದ್ದು, ಸರಾಸರಿ 110ರಿಂದ 130 ಮೆ. ವ್ಯಾಟ್ ವಿದ್ಯುತ್ ಸರಬರಾಜಾಗುತ್ತಿತ್ತು. ಉದ್ದಿಮೆಗಳ ಸಂಖ್ಯೆ ಏರಿಕೆ ಪರಿಣಾಮ ಈಗ ಬೇಡಿಕೆ ಪ್ರಮಾಣ ಸಧಿರಿ ಸುಮಾರು ಇಮ್ಮಡಿಯಾದಂತಾಗಿದೆ.
ಮಂಗಳೂರು ವ್ಯಾಪ್ತಿಯಲ್ಲಿ ಹಲವು ಬೃಹತ್/ಕಿರು ಉದ್ದಿಮೆಗಳು ಕಾರ್ಯಾಚರಿಸುತ್ತಿದ್ದು, ಅವುಗಳು ಪರ್ಯಾಯ ವಿದ್ಯುತ್ ಬಳಸುವುದರ ಜತೆಗೆ ಮೆಸ್ಕಾಂನ ನಿರೀಕ್ಷೆಯಲ್ಲಿದೆ. ಹೀಗಾಗಿ ಇಲ್ಲಿ ವಿದ್ಯುತ್ ಕಡಿತವಾದರೆ ಉದ್ದಿಮೆ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದುದರಿಂದ ಉದ್ದಿಮೆಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ ಮೆಸ್ಕಾಂಗಿದೆ. ಈ ಕಾರಣದಿಂದ ಗ್ರಾಮಾಂತರ ಭಾಗದಲ್ಲಿ ತುಸು ಹೆಚ್ಚು ಕಾಲ ವಿದ್ಯುತ್ ಕಡಿತವಾಗುತ್ತಿದೆ.
ಮಂಗಳೂರು ನಗರ ವ್ಯಾಪ್ತಿಯ ಫ್ಲ್ಯಾಟ್/ ಬಿಲ್ಡಿಂಗ್‌ನಲ್ಲಿರುವವರ ವಿದ್ಯುತ್ ಬೇಡಿಕೆ ಹೆಚ್ಚುತ್ತಲೇ ಇದೆ. ನಗರದಲ್ಲಿ ಹೆಚ್ಚಿನ ಮನೆಗಳಲ್ಲಿ ಇನ್‌ವರ್ಟರ್ ಸೌಲಭ್ಯ ಇರುವುದರಿಂದ ಅದಕ್ಕೂ ವಿದ್ಯುತ್‌ನ ಅಗತ್ಯವಿರುತ್ತದೆ. ಆದುದರಿಂದ ವಿದ್ಯುತ್ ಸರಬರಾಜು ಇರುವಾಗ ಸಹಜವಾಗಿಯೇ ಬೇಡಿಕೆ ಹೆಚ್ಚಾಗಿರುತ್ತದೆ. ಇನ್ನು ಕೆಲವರು ಜನರೇಟರ್ ಹೊಂದಿರುತ್ತಾರೆ.
ಸೌರ ಶಕ್ತಿ 1 ಮೆ.ವ್ಯಾಟ್/ ಜಲ ವಿದ್ಯುತ್ 10 ಮೆ. ವ್ಯಾಟ್ ಮಂಗಳೂರು ನಗರದಲ್ಲಿ ರೂಫ್‌ಟಾಪ್‌ಗ್ಳಲ್ಲಿ ಸೋಲಾರ್ ವಿದ್ಯುತ್ ಉತ್ಪಾದಿಸಿ ಮೆಸ್ಕಾಂಗೆ ಮಾರಾಟ ಮಾಡುವ ಪ್ರಕ್ರಿಯೆ ಈಗಾಗಲೇ ಯಶಸ್ವಿಯ ಹಂತ ದಲ್ಲಿದೆ. ಒಟ್ಟು ಸುಮಾರು 1 ಮೆ. ವ್ಯಾ.ನಷ್ಟು ವಿದ್ಯುತ್ ಉತ್ಪಾದನೆ ಇದರ ಮೂಲಕ ನಡೆಯುತ್ತಿದೆ. ವಿಶೇಷ ಅಂದರೆ ಖಾಸಗಿ ಮನೆ/ಕಚೇರಿಯ ಜತೆಗೆ ಸರಕಾರಿ ಕಚೇರಿಗಳ ಮಹಡಿಯಲ್ಲೂ ಸೌರ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಸೋಲಾರ್ ವಿದ್ಯುತ್‌ನತ್ತ ಸಾರ್ವ ಜನಿಕರು ವಿಶೇಷ ಆಸ್ಥೆ ವಹಿಸಿ ತಾವು ಬಳಸಿಕೊಂಡರೆ, ಮಂಗಳೂರಿನ ವಿದ್ಯುತ್ ಅಭಾವವನ್ನು ಸ್ವಲ್ಪ ನಿವಾರಿಸಬಹುದು. ಇದರ ಜತೆಗೆ ಮೂಡಬಿದ್ರೆಯ ಸೋಹಮ್ ಪವರ್‌ನಲ್ಲಿ ಜಲವಿದ್ಯುತ್ ಮೂಲಕ 10 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ.
ಮಂಗಳೂರು ನಗರ, ಉಳ್ಳಾಲ ಪುರಸಭೆಗೆ ಕುಡಿಯುವ ನೀರು ಪೂರೈಕೆಗೆ ಏಕೈಕ ಮೂಲ ತುಂಬೆ ವೆಂಟೆಡ್ ಡ್ಯಾಂ. ಇಲ್ಲಿನ ರೇಚಕ ಸ್ಥಾವರದಿಂದ ಮಂಗಳೂರಿನಲ್ಲಿರುವ ಓವರ್‌ಹೆಡ್ ಟ್ಯಾಂಕ್‌ಗಳಿಗೆ ನೀರು ಸರಬರಾಜು ಆಗುತ್ತದೆ. ಈ ಸ್ಥಾವರಕ್ಕೆ ಪ್ರತ್ಯೇಕ ವಿದ್ಯುತ್ ಲೈನ್ ಇದೆ. ಆದರೆ, ನಗರದ ಪಂಪಿಂಗ್ ಸ್ಟೇಶನ್ ಬೇರೆ ವ್ಯವಸ್ಥೆ ಹೊಂದಿರುವುದಿಲ್ಲ. ಇದೇ ರೀತಿ ಮೂಲ್ಕಿ, ಮೂಡಬಿದಿರೆ, ಮಂಗಳೂರು ತಾಲೂಕಿನ ಗ್ರಾ.ಪಂ.ಗಳು ಕುಡಿಯುವ ನೀರಿಗೆ ವಿವಿಧ ವ್ಯವಸ್ಥೆಗಳನ್ನು ಹೊಂದಿದೆ. ಇವೆಲ್ಲವೂ ವಿದ್ಯುತ್‌ಗಾಗಿ ಮೆಸ್ಕಾಂನ್ನು ಅವಲಂಬಿಸಿದೆ. ಕಳೆದ ಬಾರಿಯಂತೆ ಇಲ್ಲಿ ಲೋಡ್‌ಶೆಡ್ಡಿಂಗ್ ಆದರೆ ಕುಡಿಯುವ ನೀರಿಗೂ ಸಮಸ್ಯೆ ಅನಿವಾರ್ಯವಾಗಲಿದೆ.
ದ.ಕ. ಜಿಲ್ಲೆಯಲ್ಲೇ ಅತಿ ಹೆಚ್ಚು ವಿದ್ಯುತ್ ಸಂಪರ್ಕ ಹೊಂದಿರುವ ತಾಲೂಕು ಮಂಗಳೂರು. ಇಲ್ಲಿರುವ 2 (ಮಂಗಳೂರು-ಎಂ1 ಹಾಗೂ ಕಾವೂರು-ಎಂ) ಉಪವಿಭಾಗಗಳಲ್ಲಿ 19,525 ನೀರಾವರಿ ಪಂಪ್‌ಸೆಟ್‌ಗಳು, 43,200 ವಾಣಿಜ್ಯ, 3,000 ಉದ್ದಿಮೆ ಸೇರಿದಂತೆ ಒಟ್ಟು ಸುಮಾರು 3,70,403 ಸಂಪರ್ಕಗಳಿವೆ. 1 ಮಹಾನಗರ ಪಾಲಿಕೆ, 2 ಪುರಸಭೆ ಹಾಗೂ 1 ನಗರಸಭೆ ಇದ್ದು, ನಗರ ಪ್ರದೇಶಗಳ ವ್ಯಾಪ್ತಿ ಹೆಚ್ಚಿರುವ ಕಾರಣದಿಂದ ಅತೀ ಹೆಚ್ಚಿನ ಬೀದಿ ದೀಪಗಳು ಈ ಎರಡೂ ಉಪವಿಭಾಗಗಳಲ್ಲಿವೆ. ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ 50,009 ಟ್ಯೂಬ್ ಲೈಟ್‌ಗಳು, 1,0630 ಸೋಡಿಯಂ ಲೈಟ್‌ಗಳು, 370 ಹೈಮಾಸ್ಟ್ ದೀಪ ಸೇರಿದಂತೆ 64,122 ಬೀದಿದೀಪಗಳಿವೆ. ಮೂಲ್ಕಿ ಪುರಸಭೆಯಲ್ಲಿ 1,325 ಟ್ಯೂಬ್‌ಲೈಟ್, 171 ಸೋಡಿಯಂ, 18 ಹೈಮಾಸ್ಟ್ ಸೇರಿದಂತೆ ಒಟ್ಟು 1,559 ಬೀದಿ ದೀಪಗಳಿವೆ. ಮೂಡಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ 3,200 ಬೀದಿ ದೀಪಗಳಿವೆ. ಉಳ್ಳಾಲ ನಗರಸಭೆಯಲ್ಲಿ 4,773 ಬೀದಿದೀಪಗಳಿವೆ.
Click this button or press Ctrl+G to toggle between Kannada and English