ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಂಕಿ ಹಚ್ಚುವವರಿಗಿಂತ ಬೆಂಕಿ ಹರಡುವವರು ಹಾಗೂ ಆ ಬೆಂಕಿಯಲ್ಲಿ ಬೇಳೆ ಬೇಯಿಸುವವರ ಸಂಖ್ಯೆ ಜಾಸ್ತಿ ಆಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದರು ನೋವಿನಿಂದ ಹೇಳಿದ ಮಾತಿಗೆ ಕಾಂಗ್ರೆಸ್ ನಾಯಕರು ಬಣ್ಣ ಬಳಿಯಲು ಹೋಗುತ್ತಿದ್ದಾರೆ. ಕೇವಲ ಒಂದು ಮತದ ತುಷ್ಟೀಕರಣ ಮಾಡುತ್ತಾ ರಾಜಕೀಯ ಮಾಡುತ್ತಿದ್ದಾರೆ. ರಿಯಾಝ್ ಭಟ್ಕಳ್ ಸೇರಿದಂತೆ ಜಿಲ್ಲೆಯಲ್ಲಿ ಭಯೋತ್ಪಾದನಾ ಚಟುವಟಿಕೆಗೆ ಸಂಬಂಧಿಸಿದಂತೆ ನಂಟಿದ್ದರೂ ಕಾನೂನೂ ವ್ಯವಸ್ಥೆ ಭದ್ರವಾಗಿಲ್ಲ.
ಒಂದೇ ವರ್ಷದಲ್ಲಿ ಜಿಲ್ಲೆಯ ವಿವಿಧೆಡೆ ಏಳು ಮಂದಿ ಹಿಂದೂ ಯುವಕರಿಗೆ ಚೂರಿ ಇರಿತವಾಗಿದೆ. ಆದರೆ, ಯಾವುದೇ ಪ್ರಕರಣದಲ್ಲೂ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ. ಕಾರ್ತಿಕ್‌ರಾಜ್ ಕೊಲೆಯಾಗಿ ಮೂರು ತಿಂಗಳಾದರೂ ಒಬ್ಬನೇ ಒಬ್ಬ ಆರೋಪಿಯನ್ನು ಬಂಧಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಬ್ಬ ಅಮಾಯಕನ ಕೊಲೆಗೆ ಬೆಲೆ ತೆರದೆ ಇಡೀ ಪೊಲೀಸ್ ಇಲಾಖೆ ಮೌನಕ್ಕೆ ಶರಣಾಗಿರುವುದನ್ನು ಕಂಡು ಸಂಸದ ನಳಿನ್ ಕುಮಾರ್ ಕಟೀಲ್ ಅತ್ಯಂತ ನೋವಿನಿಂದ ನೀಡಿದ ಹೇಳಿಕೆಯನ್ನು ಹಿಡಿದುಕೊಂಡು ವಿವಾದ ಸೃಷ್ಟಿಸುತ್ತಿದ್ದಾರೆ. ಸಂಸದರು ಈಗಾಗಲೇ ತಮ್ಮ ಹೇಳಿಕೆಗೆ ಮಾಧ್ಯಮದ ಮೂಲಕ ಕ್ಷಮೆ ಕೂಡಾ ಯಾಚಿಸಿದ್ದಾರೆ ಎಂದರು.
ಜಿಲ್ಲೆಯಲ್ಲಿ ಸಚಿವರು, ಶಾಸಕರ ಒತ್ತಡದಿಂದ ಪೊಲೀಸರನ್ನು ಕಟ್ಟಿಹಾಕಲಾಗಿದೆ. ಇಷ್ಟೆಲ್ಲಾ ತಪ್ಪುಗಳು ತಮ್ಮ ಮೇಲೆ ಇದ್ದರೂ ಜನಪ್ರತಿನಿಧಿಯೊಬ್ಬರ ಮೇಲೆ ಗೂಬೆ ಕೂರಿಸಿ, ಮತೀಯ ಭಾವನೆ ಹುಟ್ಟಿಸುವುದು ಕಾಂಗ್ರೆಸ್ ನಾಯಕರ ಷಡ್ಯಂತ್ರ ಎಂದರು.
ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ರಾಜ್ಯ ರಾಜಧಾನಿಯಲ್ಲಿ ಹೆಣ್ಣುಮಕ್ಕಳ ಜೊತೆಗೆ ನಡೆಸಿದ ಅಸಭ್ಯ ವರ್ತನೆ ಇದಕ್ಕೆ ಮತ್ತೊಂದು ಸಾಕ್ಷಿ. ಗೃಹಮಂತ್ರಿ ಪರಮೇಶ್ವರ್ ಅವರ ಹೇಳಿಕೆಗೆ ಮಹಿಳಾ ಆಯೋಗವೇ ಸಮನ್ಸ್ ಹೊರಡಿಸಿದೆ. ಇದಕ್ಕಿಂತ ಹೀನಾಯವಾದ ಸ್ಥಿತಿ ಇನ್ನೊಂದಿದೆಯೇ ಎಂದು ಪ್ರಶ್ನಿಸಿದರು.
Click this button or press Ctrl+G to toggle between Kannada and English