ಬೆಂಗಳೂರು : ಬಿ.ಎಸ್.ಯಡಿಯೂರಪ್ಪ ಬಣದ ದೇವರಗುಂಡ ವೆಂಕಪ್ಪಗೌಡ ಸದಾನಂದ ಗೌಡ ರಾಜ್ಯದ 26ನೇ ಮುಖ್ಯಮಂತ್ರಿಯಾಗಿ ಗುರುವಾರ ಸಂಜೆ ರಾಜಭವನದ ಗಾಜಿನಮನೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಸುಬ್ರಮಣ್ಯನಗರದ ತಮ್ಮ ನಿವಾಸದಿಂದ ರಾಜಭವನಕ್ಕೆ ಬೆಂಬಲಿಗರೊಂದಿಗೆ ಕ್ರೀಂ ಕಲರ್ ಪ್ಯಾಂಟ್, ಬಿಳಿ ಬಣ್ಣದ ಅಂಗಿ, ಬ್ಲ್ಯಾಕ್ ಕಲರ್ ಶೂ ಧರಿಸಿ ಆಗಮಿಸಿದರು. ನಂತರ ಬಿ.ಎಸ್.ಯಡಿಯೂರಪ್ಪನವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಪಕ್ಷದ ಹಿರಿಯ ಮುಖಂಡರು, ಆಪ್ತರಿಗೆ ಕೈಕುಲುಕುವ ಮೂಲಕ ಅಭಿನಂದನೆ ಸ್ವೀಕರಿಸಿದರು.
ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಪ್ರತಿಜ್ಞಾವಿಧಿ ಬೋಧಿಸಿದರು. ರಾಗ, ದ್ವೇಷ ಇಲ್ಲದೆ, ಕಾನೂನು ಬದ್ಧವಾಗಿ ಅಧಿಕಾರ ನಡೆಸುವುದಾಗಿ ದೇವರ ಹೆಸರಿನಲ್ಲಿ ಡಿವಿ ಸದಾನಂದ ಗೌಡ ಪ್ರಮಾಣವಚನ ಸ್ವೀಕರಿಸಿದರು.
ಸಮಾರಂಭದಲ್ಲಿ ಜಗದೀಶ್ ಶೆಟ್ಟರ್ ಸೇರಿದಂತೆ ಅವರ ಬಣದ ಬಹುತೇಕ ಶಾಸಕರು ಗೈರುಹಾಜರಾಗಿದ್ದರು. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ಸಂಸದ ಅನಂತ್ ಕುಮಾರ್ ಹಾಜರಾಗುವ ಮೂಲಕ ಅಚ್ಚರಿ ಮೂಡಿಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರೇಣುಕಾಚಾರ್ಯ, ಸುರೇಶ್ ಕುಮಾರ್, ಶೋಭಾ ಕರಂದ್ಲಾಜೆ, ರಾಮಚಂದ್ರ ಗೌಡ, ಡಿಬಿ ಚಂದ್ರೇಗೌಡ ಸೇರಿದಂತೆ ಹಲವಾರು ಗಣ್ಯರು, ಗೌಡರ ಪತ್ನಿ, ಕುಟುಂಬಿಕರು ಪಾಲ್ಗೊಂಡಿದ್ದರು.
ಪ್ರಮಾಣವಚನ ಸ್ವೀಕಾರ ಸಮಾರಂಭ ಸಂದರ್ಭದಲ್ಲಿ ವಿ.ಎಸ್.ಆಚಾರ್ಯ, ಶೋಭಾ ಕರಂದ್ಲಾಜೆ ಸೇರಿದಂತೆ ಆರು ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇರುವುದಾಗಿ ಹೇಳಲಾಗಿತ್ತು. ಆದರೆ ಜಗದೀಶ್ ಶೆಟ್ಟರ್ ಬಣ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸಚಿವ ಸಂಪುಟ ಹೈಕಮಾಂಡ್ ನಿರ್ದೇಶನದ ಮೇರೆಗೆ ನಡೆಯಬೇಕೆಂದು ಪಟ್ಟು ಹಿಡಿದಿತ್ತು. ಅಲ್ಲದೇ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಗೈರುಹಾಜರಾಗುವ ಬಗ್ಗೆ ನಿರ್ಧಾರ ಕೈಗೊಂಡಿದ್ದರು.
Click this button or press Ctrl+G to toggle between Kannada and English