ಬಿಎಸ್ಸೆನ್ನೆಲ್ ಗುತ್ತಿಗೆ ಕಾರ್ಮಿಕರ ಧರಣಿ ಸತ್ಯಾಗ್ರಹಕ್ಕೆ ಸಿದ್ಧತೆ

12:56 PM, Tuesday, January 10th, 2017
Share
1 Star2 Stars3 Stars4 Stars5 Stars
(No Ratings Yet)
Loading...

bsnl protestಬಂಟ್ವಾಳ: ಬಿಎಸ್ಸೆನ್ನೆಲ್ ಸಂಸ್ಥೆಯಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠ ವೇತನ ಸೇರಿದಂತೆ ವಿವಿಧ ಸವಲತ್ತು ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಬಿಎಸ್ಸೆನ್ನೆಲ್ ನಾನ್ ಪರ್ಮನೆಂಟ್ ವರ್ಕಸ್ ಫೆಡರೇಶನ್ ದ.ಕ. ಜಿಲ್ಲಾ ಸಮಿತಿ ಆಶ್ರಯದಲ್ಲಿ ಕಾರ್ಮಿಕರು ಜನವರಿ 12ರಿಂದ ಮಂಗಳೂರು ಕೇಂದ್ರ ಕಾರ್ಮಿಕ ಆಯುಕ್ತರ ಕಚೇರಿ ಮುಂಭಾಗ ಅನಿರ್ದಿಷ್ಠಾವಧಿವರೆಗೆ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ.

ಈ ಬಗ್ಗೆ ಸೋಮವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಫೆಡರೇಶನ್‌ನ ಅಧ್ಯಕ್ಷ ಮುಹಮ್ಮದ್ ಹನೀಫ್ ಮಾತನಾಡಿ, ಜಿಲ್ಲೆಯ ಎಲ್ಲ ತಾಲೂಕಿನ ಬಿಎಸ್ಸೆನ್ನೆಲ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಆಧಾರಿತ ಕಾರ್ಮಿಕರು ಈ ಧರಣಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಧರಣಿಗೆ ಮುನ್ನ ಬಿಎಸ್ಸೆನ್ನೆಲ್ ಸಂಸ್ಥೆಯ ಜಿಎಂ ಹಾಗೂ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗುವುದು. ಬಳಿಕ ಅಲ್ಲಿಂದ ಮೆರವಣಿಗೆ ಮೂಲಕ ಕಾರ್ಮಿಕ ಆಯುಕ್ತರ ಕೇಂದ್ರ ಕಚೇರಿಗೆ ಆಗಮಿಸಿ ತಮ್ಮ ಬೇಡಿಕೆ ಈಡೇರುವ ತನಕ ಅನಿರ್ದಿಷ್ಠಾವಧಿವರೆಗೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದ ಅವರು, ಧರಣಿಯ ಸಂದರ್ಭಗಳಲ್ಲಿ ಸಂಸ್ಥೆಯ ಕಚೇರಿಯಲ್ಲಿ ಹಾಗೂ ಬಿಎಸ್ಸೆನ್ನೆಲ್ ಗ್ರಾಹಕರಿಗೆ ತೊಂದರೆಯಾದಲ್ಲಿ ಕಾರ್ಮಿಕರು ಜವಾಬ್ದಾರರಲ್ಲ ಎಂದು ಸ್ಪಷ್ಟಪಡಿಸಿದರು.

2016 ರ ಜೂನ್‌ನಿಂದ ಆಗಸ್ಟ್ ವರೆಗಿನ ನಾಲ್ಕು ತಿಂಗಳಲ್ಲಿ ಪಿಎಫ್, ಇಎಸ್‌ಐ ಸಹಿತ 10,008 ರೂಪಾಯಿ ವೇತನ ಲಭ್ಯವಾಗುತ್ತಿತ್ತು. ತದನಂತರದ ತಿಂಗಳಿನಿಂದ ಪಿಎಫ್, ಇಎಸ್‌ಐ ಸೇರಿದಂತೆ 6,396 ರೂಪಾಯಿ ಮಾತ್ರ ವೇತನ ನೀಡಲಾಗುತ್ತಿದೆ. ತಮ್ಮ ಹಿಂದಿನ ವೇತನದಿಂದ ಇದನ್ನು ಕಡಿತಗೊಳಿಸಿರುವುದು ಕಾರ್ಮಿಕ ವಿರೋಧಿ ನೀತಿಯಾಗಿದೆ ಎಂದು ತಿಳಿಸಿದ ಅವರು, ಕಾನೂನು ಬದ್ಧವಾಗಿ ಕನಿಷ್ಠ ವೇತನ ಸಹಿತ ಎಲ್ಲ ಸೌಲಭ್ಯಗಳು ಕೂಡಾ ಸಿಗಬೇಕೆಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಸುನಿಲ್ ಕುಮಾರ್, ಚಂದ್ರಹಾಸ, ರಾಜೇಶ್, ಪದ್ಮನಾಭ ಸಹಿತ ಮತ್ತಿತರರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English