ಮಂಗಳೂರು: ಎತ್ತಿನಹೊಳೆ ಯೋಜನೆಯಿಂದ ಕೋಲಾರ, ಚಿಕ್ಕಬಳ್ಳಾಪುರಕ್ಕೆ ಒಂದು ಹನಿ ನೀರು ಕೂಡಾ ಸಿಗುವುದಿಲ್ಲ. ಬಿಳಿ ಆನೆ ಆಗಿರುವ ಎತ್ತಿನಹೊಳೆ ಕೆಲವರ ಜೇಬು ತುಂಬಿಸಲು ರೂಪಿಸಿರುವ ಯೋಜನೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ. ಆರೋಪಿಸಿದರು.
ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಯೋಜನೆಗೆ 2,300 ಕೋಟಿ ವೆಚ್ಚ ಮಾಡಲಾಗಿದೆ. ಯೋಜನೆಗೆ ಪರಿಸರ ಇಲಾಖೆ ಅನುಮತಿ ಇಲ್ಲ. ಸಮರ್ಪಕ ಯೋಜನಾ ವರದಿ ಇಲ್ಲ. ಒಟ್ಟು ಯೋಜನೆಯಲ್ಲಿಯೇ ಗೊಂದಲ ಇದೆ. ಈ ಹಿನ್ನೆಲೆಯಲ್ಲಿ ಎತ್ತಿನಹೊಳೆ ಯೋಜನೆ ಕುರಿತಂತೆ ಶ್ವೇತ ಪತ್ರ ಹೊರಡಿಸುವಂತೆ ಒತ್ತಾಯಿಸಿದರು.
ಎತ್ತಿನಹೊಳೆ ಯೋಜನೆ ಕುರಿತು ಬಿಜೆಪಿಯಲ್ಲಿ ಯಾವುದೇ ಗೊಂದಲ ಇಲ್ಲ. ಹೆಚ್ಚುವರಿ ನೀರು ಇದ್ದರೆ ಬರಪೀಡಿತ ಪ್ರದೇಶಕ್ಕೆ ನೀಡಬೇಕೆಂಬ ನಿಲುವಿಗೆ ಬಿಜೆಪಿ ಬದ್ಧವಾಗಿದೆ. ಆದರೆ ಯಾವುದೇ ಪ್ರದೇಶವನ್ನು ಬರಡು ಮಾಡಿ ನೀರು ನೀಡುವುದಲ್ಲ.
2011ರಲ್ಲಿ 8.300 ಕೋಟಿಯ ಈ ಯೋಜನೆಗೆ ಆಗಿನ ಬಿಜೆಪಿ ಸರಕಾರ ಅನುಮೋದನೆ ನೀಡಿತ್ತು. ಆದರೆ ಹಣ ಬಿಡುಗಡೆ ಮಾಡಿರಲಿಲ್ಲ.
ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರು ಹೇಳುವಂತೆ ಎತ್ತಿನಹೊಳೆಯಿಂದ 24 ಟಿಎಂಸಿ ನೀರು ಸಿಗುವುದಿಲ್ಲ. ಕೇವಲ 9.55 ಟಿಎಂಸಿ ನೀರು ಸಿಗುವುದು. ಈ ಹಿನ್ನೆಲೆಯಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ಜಗದೀಶ ಶೆಟ್ಟರ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಮತ್ತು ತಜ್ಞರಿರುವ ಸಮಿತಿ ರಚಿಸಿ ವರದಿ ನೀಡುವಂತೆ ಸೂಚಿಸಿ ಯೋಜನೆಯ ಟೆಂಡರ್ ರದ್ದುಗೊಳಿಸಿದ್ದರು. ಆದರೆ 2013ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ವರದಿ ಬರುವ ಮೊದಲೇ ಯೋಜನಾ ವೆಚ್ಚವನ್ನು 13 ಸಾವಿರ ಕೋಟಿಗೇರಿಸಿ ಹಣ ಬಿಡುಗಡೆಗೊಳಿಸಿದೆ.
ಸರಕಾರ ಯಾವುದೇ ಸಮರ್ಪಕ ಮಾಹಿತಿ ನೀಡದೆ ಕರಾವಳಿ ಮತ್ತು ಬಯಲು ಸೀಮೆಯ ಜನರನ್ನು ವಂಚಿಸಿ, ವೀರಪ್ಪ ಮೊಯ್ಲಿಯವರನ್ನು ಚುನಾವಣೆಯಲ್ಲಿ ಗೆಲ್ಲಿಸಲು ಹಾಗೂ ಚುನಾವಣಾ ಫಂಡ್‌ಗಾಗಿ ಮಾತ್ರ ಎಂದರು.
Click this button or press Ctrl+G to toggle between Kannada and English