ಖೋಟಾನೋಟು ಹೊಂದಿದ್ದ ವ್ಯಕ್ತಿಯೋರ್ವನಿಗೆ ಮಂಗಳೂರಿನ ಸತ್ರ ನ್ಯಾಯಾಲಯದಿಂದ ಐದು ವರ್ಷ ಜೈಲು ಶಿಕ್ಷೆ

4:45 PM, Wednesday, January 25th, 2017
Share
1 Star2 Stars3 Stars4 Stars5 Stars
(No Ratings Yet)
Loading...

Abdul-Khadarಮಂಗಳೂರು: ಖೋಟಾನೋಟು ಹೊಂದಿದ್ದ ವ್ಯಕ್ತಿಯೋರ್ವನಿಗೆ ಮಂಗಳೂರಿನ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆ ಸಹಿತ 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ದಂಡ ವಿಧಿಸಲು ತಪ್ಪಿದಲ್ಲಿ ಅಪರಾಧಿ ಆರು ತಿಂಗಳ ಹೆಚ್ಚುವರಿ ಕಾರಾಗೃಹ ಸಜೆ ಅನುಭವಿಸುವಂತೆ ಜಿಲ್ಲಾ ಸತ್ರ ನ್ಯಾಯಾಧೀಶ ಕೆ.ಎಸ್.ಬಿಳಗಿ ತೀರ್ಪಿನಲ್ಲಿ ತಿಳಿಸಿದ್ದಾರೆ.

ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕುಳ ಗ್ರಾಮದ ಅರಿಪ್ಪುಕಟ್ಟ ನಿವಾಸಿ ಅಬ್ದುಲ್‌ಖಾದರ್(62) ಶಿಕ್ಷೆಗೊಳಗಾದ ಅಪರಾಧಿ. ಪಬ್ಲಿಕ್ ಪ್ರಾಸಿಕ್ಯೂಟರ್ ಪುಷ್ಪರಾಜ್ ಕೆ. ವಾದಿಸಿದ್ದರು.

2002ರ ಫೆಬ್ರವರಿ 6ರಂದು ಅಂದಿನ ಡಿವೈಎಸ್ಪಿ ಟಿ.ಸಿ.ಎಂ.ಶರೀಫ್ ಅವರಿಗೆ ಅಬ್ದುಲ್‌ಖಾದರ್ ಕೇರಳದಿಂದ ರೈಲಿನಲ್ಲಿ ಆಗಮಿಸುವ ಕುರಿತು ಖಚಿತ ಮಾಹಿತಿ ದೊರೆತಿತ್ತು. ನಗರದ ರೈಲ್ವೆ ರಸ್ತೆಯ ಹಂಪನಕಟ್ಟೆ ಸಮೀಪ ಮುಂಜಾನೆ ವ್ಯಕ್ತಿಯೋರ್ವ ಬಿಳಿ ಪಾಲಿಥಿನ್ ಚೀಲದಲ್ಲಿ ವಸ್ತುವೊಂದನ್ನು ಒಯ್ಯುತ್ತಿದ್ದುದನ್ನು ನಗರದ ಉತ್ತರ ಪೊಲೀಸ್ ಠಾಣೆಯ ಪೇದೆಗಳಾದ ಮೋಹನ್ ಕೆ.ವಿ. ಹಾಗೂ ಅಶೋಕ್ ಗಮನಿಸಿದ್ದರು.

ವಿಚಾರಿಸಿದಾಗ ನೋಟಿನ ಕಂತೆಯನ್ನು ಬಿಟ್ಟು ಆರೋಪಿ ಪರಾರಿಯಾಗಲೆತ್ನಿಸಿದ್ದ. ಸೆರೆ ಹಿಡಿದ ಪೊಲೀಸರು ಪರಿಶೀಲಿಸಿದಾಗ 100ರ 870 ನೋಟುಗಳನ್ನು ಹೊಂದಿದ್ದ 9 ಕಂತೆಗಳನ್ನು ಬಿಳಿ ಪೇಪರ್‌ನಲ್ಲಿ ಸುತ್ತಿ ಸಾಗಿಸುತ್ತಿದ್ದುದು ಪತ್ತೆಯಾಯಿತು.

ಪೊಲೀಸರು ಆತನನ್ನು ಅಂದಿನ ಪಿಎಸ್ಐ ನಾರಾಯಣ ಅವರ ಎದುರು ಹಾಜರುಪಡಿಸಿ ತನಿಖೆ ನಡೆಸಿದಾಗ ಆರೋಪಿ ಚೆರ್ಕಳದ ಸಿ.ಎಚ್. ಅಮ್ಮು ಹಣವನ್ನು ಪೂರೈಸಿರುವುದಾಗಿ ತಪ್ಪೊಪ್ಪಿಕೊಂಡಿದ್ದನು. ಆದರೆ ಹಣ ಪೂರೈಸಿದ್ದನೆನ್ನಲಾದ ಚೆರ್ಕಳದ ಬಿ.ಬಿಂಜ ಅಮು ಎಂಬಾತನನ್ನು ವಿಚಾರಣೆ ನಡೆಸಿ ಬಿಡಲಾಗಿತ್ತು. ಆದರೆ ಆರೋಪಿ ಅಬ್ದುಲ್ ಖಾದರ್ ಜಾಮೀನಿನ ಮೇರೆಗೆ ಬಿಡುಗಡೆಗೊಂಡಿದ್ದ.

ಪೊಲೀಸರು ವಶಪಡಿಸಿಕೊಂಡ ನೋಟುಗಳ ಕುರಿತು ಅಂದಿನ ಮೈಸೂರು ಆರ್‌ಬಿಐನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಜವಹಾರ ಎಲ್.ಪಂಡಿತ್ ಖೋಟಾನೋಟುಗಳೆಂಬುದರ ಬಗ್ಗೆ ದೃಢೀಕರಣ ಪತ್ರ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ಡಿವೈಎಸ್ಪಿ, ಪೊಲೀಸ್ ಪೇದೆಗಳು ಹಾಗೂ ಪಂಚರರಾದ ದೀಪಕ್ ಹಾಗೂ ನರೇಂದ್ರ ಸಹಿತ ಏಳು ಸಾಕ್ಷಿಗಳನ್ನು ವಿಚಾರಣೆ ನಡೆಸಿತ್ತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English