ಮಂಗಳೂರು : ಮಂಗಳೂರು ಹೊರವಲಯ ಪಚ್ಚನಾಡಿ ದೇವಿ ನಗರದಲ್ಲಿ ಕಾಯಿಸಿದ ಮೀನು ತಿಂದು ಯುವತಿಯೋರ್ವಳು ಅಸ್ವಸ್ಥಳಾಗಿ ಬಳಿಕ ಸಾವನ್ನಪ್ಪಿದ ಘಟನೆ ಭಾನುವಾರ ಸಂಭವಿಸಿದೆ. ಪಚ್ಚನಾಡಿ ದೇವಿ ನಗರದ ಮಂಜುನಾಥ ಅವರ ಪುತ್ರಿ ಸುಶ್ಮಿತಾ (17) ಸಾವನ್ನಪ್ಪಿದ ಯುವತಿ. ಈಕೆ ವಾಮಂಜೂರಿನ ಕಾಲೇಜೊಂದರ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದಳು.
ಶನಿವಾರ ರಾತ್ರಿ ಸುಶ್ಮಿತಾ ಅವರು ಮನೆಯಲ್ಲಿ ರಿಫೈನ್ ಆಯಿಲ್‌ನಲ್ಲಿ ಮೀನು ಕಾಯಿಸಿದ್ದರು. ಅದರಲ್ಲಿ ಎರಡು ಮೀನುಗಳನ್ನು ಆಕೆ ತಿಂದಿದ್ದು, ಕೆಲವೇ ಹೊತ್ತಿನಲ್ಲಿ ಆಕೆಗೆ ಸ್ಮೃತಿ ತಪ್ಪಿತ್ತು. ಕೂಡಲೇ ಆಕೆಯನ್ನು ಸಮೀಪದ ಕ್ಲಿನಿಕ್‌ಗೆ ದಾಖಲಿಸಲಾಯಿತು. ಅಲ್ಲಿ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ರವಿವಾರ ಅಪರಾಹ್ನ ಆಕೆಯನ್ನು ಕುಂಟಿಕಾನದ ಎ.ಜೆ, ಆಸ್ಪತ್ರೆಗೆ ದಾಖಲಿಸಲು ಕೊಂಡೊಯ್ಯುತ್ತಿದ್ದಾಗ 3.50 ರ ವೇಳೆಗೆ ಆಕೆ ದಾರಿ ಮಧ್ಯೆ ಸಾವನ್ನಪ್ಪಿದಳು.
ಮೀನಿನಲ್ಲಿ ಅಥವಾ ಮೀನನ್ನು ಎಣ್ಣೆಯಲ್ಲಿ ಕಾಯಿಸುವಾಗ ವಿಷದ ಅಂಶ ಉತ್ಪತ್ತಿಯಾಗಿ ಅದು ಈಕೆಯ ಸಾವಿಗೆ ಕಾರಣ ಆಗಿರ ಬಹುದೇ ಎಂಬ ಶಂಕೆ ಉಂಟಾಗಿದೆ. ಆಕೆಯ ಮಾವ ಜಯ ಪ್ರಕಾಶ್ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ ಮನವಿ ಮಾಡಿದ್ದಾರೆ. ಸೋಮವಾರ ಆಕೆಯ ದೇಹದ ಮರಣೋತ್ತರ ಪರಿಕ್ಷೆ ನಡೆಸಲಾಗುವುದು. ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಸಾವಿನ ನೈಜ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Click this button or press Ctrl+G to toggle between Kannada and English