ಮಂಗಳೂರು: ಎತ್ತಿನಹೊಳೆ ಯೋಜನೆಯನ್ನು ಬಿಜೆಪಿ ಅಧಿಕಾರದಲ್ಲಿದ್ದಾಗ ಸದಾನಂದಗೌಡರೇ ಜಾರಿ ಮಾಡಿದ್ದರು. ಆಗ ವಿರೋಧಿಸದ ನಳೀನ್ ಕುಮಾರ್ ಇಂದು ವಿರೋಧಿಸುತ್ತಿದ್ದಾರೆ. ಅವರಿಗೆ ನೈತಿಕತೆಯಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟೀಕಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಯ ಬಗ್ಗೆ ಕಲಾಪದಲ್ಲಿ ಈಗಾಗಲೇ ಮಾತನಾಡಿದ್ದೇನೆ. ಯೋಜನೆಗೆ ಸಾಕಾಗುವಷ್ಟು ನೀರಿಲ್ಲ ಎಂದೂ ತಿಳಿಸಿದ್ದೇನೆ. ಆದರೆ ಎತ್ತಿನಹೊಳೆ ಯೋಜನೆಗೆ ಅಡ್ಡಗಾಲು ಹಾಕಿದ್ದೇನೆ ಎಂದು ನನ್ನ ಮೇಲೆಯೇ ಗೂಬೆ ಕೂರಿಸುತ್ತಿದ್ದಾರೆ ಎಂದರು.
ದ.ಕ. ಜಿಲ್ಲೆಯಲ್ಲಿ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್‌ಗೆ ನೈತಿಕತೆಯಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಸದಾನಂದಗೌಡರೇ ಈ ಯೋಜನೆ ಜಾರಿ ಮಾಡಿದ್ದರು. ಆಗ ವಿರೋಧಿಸದ ನಳೀನ್ ಕುಮಾರ್ ಇಂದು ವಿರೋಧಿಸುತ್ತಿರುವುದನ್ನು ನೋಡಿದರೆ ಹಾಸ್ಯಸ್ಪದವಾಗಿದೆ ಎಂದು ಸಂಸದರನ್ನು ತರಾಟೆಗೆ ತೆಗೆದುಕೊಂಡರು.
ಎತ್ತಿನಹೊಳೆ ಯೋಜನೆ ಹಣ ಹೊಡೆಯುವ ಕಾರ್ಯಕ್ರಮವಾಗಿದ್ದು, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಇಂತಹ ಯೋಜನೆಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಜಿಲ್ಲೆ ಈಗಾಗಲೇ ಹಲವು ಸಮಸ್ಯೆಗಳಿಂದ ಬಳಲುತ್ತಿದೆ. ಆದರೆ ಸರ್ಕಾರಕ್ಕೆ ಸ್ಪಂದಿಸುವ ಸೌಜನ್ಯವಿಲ್ಲ. ಬರಗಾಲದಿಂದ ರಾಜ್ಯದ ಹಲವಾರು ಕಡೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿ ಸಾರ್ವಜನಿಕರು ಪ್ರತಿಭಟನೆ ನಡೆಯುತ್ತಿದ್ದರೂ ಸರ್ಕಾರ ಮಾತ್ರ ಬೇರೆ ವಿಚಾರಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ರಾಜ್ಯ ಸರ್ಕಾರವನ್ನು ಟೀಕಿಸಿದರು.
ನಂಜನಗೂಡು ಉಪ ಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸುವ ವಿಚಾರದ ಬಗ್ಗೆ ಮಾತನಾಡಿದ ಅವರು, ಇನ್ನೂ ಅದರ ಬಗ್ಗೆ ನಿರ್ಧಾರ ಕೈಗೊಂಡಿಲ್ಲ. ನಂಜನಗೂಡಿನಲ್ಲಿ ನಡೆಯುವ ಪಕ್ಷದ ಸಭೆಯ ನಂತರ ತೀರ್ಮಾನ ಮಾಡಲಾಗುವುದು ಎಂದರು.
Click this button or press Ctrl+G to toggle between Kannada and English