ಮಂಗಳೂರು : ಕರಾವಳಿ ಸೌಹಾರ್ದ ರ‍್ಯಾಲಿ’ ವಿಫಲಗೊಳಿಸಲು ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಭೇಟಿಯನ್ನು ತಡೆಯಲು ಯತ್ನಿಸುತ್ತಿರುವ ಸಂಘಪರಿವಾರದ ಕೃತ್ಯವನ್ನು ಖಂಡಿಸುವುದಾಗಿ ಸಿಪಿಎಂ ರಾಜ್ಯ ಸಮಿತಿ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ, ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಪ್ರಾಂತ್ಯದಲ್ಲಿ ಕೋಮು ವಾದಿಗಳ ಅಟ್ಟಹಾಸ ನೆಲದ ಸಂಸ್ಕೃತಿಗೆ ಅಪಮಾನವಾಗಿದ್ದು, ದಲಿತ, ಹಿಂದುಳಿದ ವರ್ಗಗಳ ಸ್ವಾಭಿಮಾನಕ್ಕೆ ಧಕ್ಕೆಯನ್ನುಂಟು ಮಾಡುತ್ತಿದೆ. ಸಂಘಪರಿವಾರದ ಶಕ್ತಿಗಳ ಬಗ್ಗೆ ದಲಿತ, ಹಿಂದುಳಿದ ವರ್ಗದವರು ಎಚ್ಚೆತ್ತುಕೊಳ್ಳಬೇಕೆಂದು ಹೇಳಿದರು.
ಪಿಣರಾಯಿ ವಿಜಯನ್ ಅವರ ಭೇಟಿಯ ವಿರುದ್ಧ ಪ್ರತಿಭಟಿಸುತ್ತಿರುವ ಸಂಘಪರಿವಾರ, ಅವರನ್ನು ಸಾವಿನ ವ್ಯಾಪಾರಿಯೆಂದು ನಿರೂಪಿಸುತ್ತಿದ್ದು, ಇದು ಸಂಘಪರಿವಾರಕ್ಕೆ ಇತಿಹಾಸವನ್ನು ಮರೆಯುವ ಮತ್ತು ತಿರುಚುವ ಗುಣ ಕರಗತವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಭಾರತ ವಿಭಜನೆಯ ಕಾಲದಿಂದ ಕೋಮುಧ್ರುವೀಕರಣ ಆರಂಭಿಸಿ, ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹತ್ಯೆಯಿಂದ ಗುಜರಾತ್ ಹತ್ಯಾಕಾಂಡದವರೆಗೂ ಸಾವಿನ ವ್ಯಾಪಾರಿಗಳು ಯಾರು ಎಂಬುದು ಭಾರತದ ಇತಿಹಾಸ ತಿಳಿದವರಿಗೆ ಗೊತ್ತಿದೆ ಎಂದು ಶ್ರೀರಾಮರೆಡ್ಡಿ ಹೇಳಿದರು.
ಸಂಘಪರಿವಾರದ ಕಾರ್ಯಕರ್ತರು ಪಕ್ಷದ ಕಚೇರಿಗೆ ಬೆಂಕಿ ಹಾಕಿ, ಬ್ಯಾನರ್‌ಗಳನ್ನು ಹರಿಯುವ ಮೂಲಕ ಹೆದರಿಸಬಹುದೆಂದು ಭಾವಿಸಿದಂತಿದೆ. ಆದರೆ, ಇದರಿಂದ ಪಕ್ಷದ ತತ್ವಸಿದ್ಧಾಂತಗಳು ಬದಲಾಗದು. ಕರಾವಳಿಯ ಕೋಮು ಸೌಹಾರ್ದ ಕಾಪಾಡಲು ಪಕ್ಷ ಯಾವ ತ್ಯಾಗಕ್ಕೂ ಸಿದ್ಧವಿದೆ. ಆರೆಸ್ಸೆಸ್ ನ ಸೂಚನೆಯಂತೆ ಸಂಘಪರಿವಾರವು ಸೌಹಾರ್ದವನ್ನು ವಿರೋಧಿಸುತ್ತಿದೆ. ಇದರ ಹಿಂದೆ ಬಿಜೆಪಿ ಕೆಲಸ ಮಾಡಿದೆ ಎಂದು ಶ್ರೀರಾಮರೆಡ್ಡಿ ಆರೋಪಿಸಿದರು.
ಫೆ. 25ರಂದು ಶನಿವಾರ ನಗರದ ನೆಹರೂ ಮೈದಾನದಲ್ಲಿ ನಡೆಯುವ ‘ಕರಾವಳಿ ಸೌಹಾರ್ದ ರ‍್ಯಾಲಿ’ ಯನ್ನು ದ.ಕ. ಜಿಲ್ಲೆಯ ಜನರು ಯಶಸ್ವಿಗೊಳಿಸಬೇಕೆಂದು ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ವಿ.ಜೆ.ಕೆ.ನಾಯರ್, ಜೆ.ಬಾಲಕೃಷ್ಣ ಶೆಟ್ಟಿ, ರಾಜ್ಯ ಸಮಿತಿ ಸದಸ್ಯ ಕೆ.ಯಾದವ ಶೆಟ್ಟಿ, ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English