ಮಂಗಳೂರು : ಸಿಪಿಐಎಂ ಪಕ್ಷದ ಮಂಗಳೂರು ಘಟಕ ನೆಹರೂ ಮೈದಾನದಲ್ಲಿ ಆಯೋಜಿಸಿದ್ದ ಕೋಮು ಸೌಹಾರ್ದ ಜಾಥಾ ಉದ್ದೇಶಿಸಿ ಮಾತನಾಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ 1947ರ ಜುಲೈ 17ರಂದು ಆರ್ಗನೈಸರ್ ಎಂಬ ಪತ್ರಿಕೆಗೆ ಬರೆದ ಪ್ರಮುಖ ಲೇಖನವೊಂದರಲ್ಲಿ ಈ ದೇಶದ ಬಾವುಟ ಭಾರತಕ್ಕೆ ತಕ್ಕುದಾದುದಲ್ಲ ಎಂದು ಪ್ರತಿಪಾದಿಸಿದ್ದ ಆರ್‌ಎಸ್‌ಎಸ್ ದೇಶದಲ್ಲಿ ನಡೆದ ಎಲ್ಲಾ ಕೋಮು ಗಲಭೆಗಳಲ್ಲೂ ಕೈವಾಡವಿದೆ. ಕೋಮು ದ್ವೇಷದ ಕಿಡಿಗಳನ್ನು ಯುವಕರಲ್ಲಿ ಹಚ್ಚಿ ವಿಷ ಬೀಜವನ್ನು ಬಿತ್ತುವ ಮೂಲಕ ಗಲಭೆಗೆ ಕಿಚ್ಚು ಹಚ್ಚುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಆರ್‌ಎಸ್‌ಎಸ್ ಯೋಚನೆ ಇಂದಿಗೂ ಹಾಗೆಯೇ ಇದೆ. ಕೇಂದ್ರದ ಗೃಹಸಚಿವರು ಜಾತ್ಯಾತೀತ ಎಂಬ ಪದವೇ ಅಪಾಯಕಾರಿ ಎಂದು ಹೇಳುವ ಮೂಲಕ ಆರ್‌ಎಸ್ಎಸ್ ಸಿದ್ಧಾಂತಕ್ಕೆ ಪುಷ್ಠಿ ನೀಡುತ್ತಿದ್ದಾರೆ ಎಂದು ಎಂದು ಆಪಾದಿಸಿದರು.
ಗಾಂಧೀಜಿ ಹತ್ಯೆಯಾಗಿದ್ದು ಗೋಡ್ಸೆಯ ಗುಂಡೇಟಿನಿಂದ ಎನ್ನುವುದು ರುಜುವಾತಾಗಿದೆ. ಗಾಂಧಿಯ ಹತ್ಯೆಯ ಬಳಿಕ ಸಿಹಿತಿಂಡಿ ಹಂಚಿ ಸಂಭ್ರಮಿಸಿದ ಆರ್‌ಎಸ್ಎಸ್ ಕಾರ್ಯಕರ್ತರು ದೇಶದಲ್ಲಿ ಇಂದಿಗೂ ಅದೇ ಚಾಳಿಯನ್ನು ಮುಂದುವರಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್‌ಎಸ್ಎಸ್ ಕೈವಾಡದಲ್ಲಿ ಕೆಲವು ಕೊಲೆಗಳು ನಡೆದಿದೆ. ಅವರದ್ದೇ ಪಕ್ಷದವರನ್ನು ಕೊಂದಿರುವ ಇತಿಹಾಸ ಅವರಿಗಿದೆ, ಆರ್‌ಎಸ್ಎಸ್ ನಾಯಕರು ಕೇರಳದಲ್ಲಿ ತಮ್ಮ ಸಿದ್ಧಾಂತವನ್ನು ಬಿತ್ತಲು ಮಾತ್ರ ಸಾಧ್ಯವಿಲ್ಲ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ಜ್ಯೋತಿವೃತ್ತದಿಂದ ಆರಂಭಗೊಂಡ ಸೌಹಾರ್ದ ರ‍್ಯಾಲಿ ನೆಹರು ಮೈದಾನಿನಲ್ಲಿ ಮುಕ್ತಾಯ ಗೊಂಡಿತು.
ಕಾರ್ಯಕ್ರಮದಲ್ಲಿ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಜಿ.ವಿ. ಶ್ರೀರಾಮ ರೆಡ್ಡಿ, ಕಾಸರಗೋಡು ಜಿಲ್ಲೆಯ ಸಂಸದ ಕೆ. ಕರುಣಾಕರನ್, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ವಿ.ಜಿ.ಕೆ. ನಾಯರ್, ಜಿ.ಎನ್. ನಾಗರಾಜ್, ವಸಂತ ಆಚಾರಿ, ಜೆ. ಬಾಲಕೃಷ್ಣ ಶೆಟ್ಟಿ, ಕೆ. ಯಾದವ ಶೆಟ್ಟಿ, ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಸತೀಶ್ಚಂದ್ರನ್, ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮತ್ತಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English