ವರ್ಕಾಡಿ : ಶಾಂತಿಪಳಿಕೆ ವರ್ಕಾಡಿ ಶ್ರೀ ಮಿತ್ತಮೊಗರಾಯ ದೈವಸ್ಥಾನದ ಭಂಡಾರಸ್ಥಾನದ ಬ್ರಹ್ಮಕಲಶೋತ್ಸವವು ತಂತ್ರಿವರ್ಯರಾದ ವೇದ ಮೂರ್ತಿ ವರ್ಕಾಡಿ ಹೊಸಮನೆ ರಾಜೇಶ್ ತಾಳಿತ್ತಾಯರ ದಿವ್ಯ ಹಸ್ತದಿಂದ ಮೇ 7 ರ ಭಾನುವಾರ ಬೆಳಿಗ್ಗೆ 10.20 ರ ಮಿಥುನ ಲಗ್ನದಲ್ಲಿ ವಿವಿಧ ವೈಧಿಕ ವಿಧಿವಿಧಾನಗಳಿಂದ ನಡೆಯಿತು.
ಮಿತ್ತಮೊಗರಾಯ ದೈವವು ನರಿಂಗಾನ ಮತ್ತು ವರ್ಕಾಡಿ ಗ್ರಾಮಸ್ಥರ ಆರಾಧ್ಯ ದೈವ, ಸುಮಾರು 800 ವರ್ಷಗಳ ಇತಿಹಾಸವಿರುವ ಈ ದೈವಕ್ಕೆ ಎರಡು ಸ್ಥಳಗಳಲ್ಲಿ ನೇಮ ನಡೆಯುತ್ತದೆ. ಊರಿನ ಭಕ್ತಾದಿಗಳಲ್ಲದೆ ಪರವೂರಿನವರು ಈ ದೈವವನ್ನು ಆರಾಧಿಸುತ್ತಾರೆ. ಯುವಶಕ್ತಿ ಮುತುವರ್ಜಿಯಿಂದ ಕೆಲಸಮಾಡಿದರೆ ಯಾವಕೆಲಸವನ್ನು ಬೇಕಾದರೂ ಅಲ್ಪಕಾದಲ್ಲಿ ಮಾಡಬಹುದು ಎನ್ನುವುದಕ್ಕೆ ಇಲ್ಲಿನ ಭಂಡಾರಸ್ಥಾನದ ನವೀಕರಣವೇ ಸಾಕ್ಷಿ ಎಂದು ಬಲೆತ್ತೋಡು ನಾರಾಯಣ ಶೆಟ್ಟಿ ಹೇಳಿದರು.
ಧಾರ್ಮಿಕ ಮುಖಂಡ ನಾರ್ಯಗುತ್ತು ತಿಮ್ಮಪ್ಪಕೊಂಡೆ ಯಾನೆ ಮಂಜುಭಂಡಾರಿ ಮಾತನಾಡಿ ಕ್ಷೇತ್ರದ ಕಾರ್ಣಿಕ ಮತ್ತು ಮಿತ್ತಮೊಗರಾಯ ದೈವದ ಆರಾಧನೆಯ ಮಹತ್ವದ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ನಡೆದ ಸರಳ ಸಮಾರಂಭದಲ್ಲಿ ದೈವಸ್ಥಾನದ ಭಂಡಾರಸ್ಥಾನದ ನವೀಕರಣಕ್ಕೆ ಸಹಕರಿಸಿದ ಮಹನೀಯರನ್ನು ರಾಜೇಶ್ ತಾಳಿತ್ತಾಯರ ಉಪಸ್ಥಿತಿಯಲ್ಲಿ ಫಲಪುಷ್ಪ ನೀಡಿ ಸಾಲು ಹೊದಿಸಿ ಸನ್ಮಾನಿಸಲಾಯಿತು.
ಶ್ರೀ ಮಿತ್ತಮೊಗರಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಪ್ರಸನ್ನ ಪಕ್ಕಳ ಬಲೆತ್ತೋಡು, ಕ್ಷೇತ್ರದ ಗಡಿಪ್ರಧಾನರಾದ ಬಾಲಕೃಷ್ಣ ಅಡಪ ಭಂಡಾರ ಮನೆ, ಮಿತ್ತಮೊಗರಾಯ ಸೇವಾಸಮಿತಿಯ ಅಧ್ಯಕ್ಷ ಸದಾಶಿವ ಶೆಟ್ಟಿ ಭಂಡಾರಮನೆ, ಮೊದಲಾದವರು ಉಪಸ್ಥಿತರಿದ್ದರು.
ಪತ್ರಕರ್ತ ಸತೀಶ್ ಪುಂಡಿಕಾಯಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.
Click this button or press Ctrl+G to toggle between Kannada and English