ನೋಟು ಅಮಾನ್ಯಗೊಳಿಸಿದ ಬಳಿಕ ದೇಶದ ಆರ್ಥಿಕ ಸ್ಥಿತಿ ಪ್ರಗತಿಯಾಗಿದೆ – ಮೆಘಾವಲ್

8:15 PM, Thursday, May 18th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

meghavalಮಂಗಳೂರು : ಕೇಂದ್ರ ಸರಕಾರದ ಕ್ರಾಂತಿಕಾರಿ ಆರ್ಥಿಕ ನೀತಿಯಿಂದ ನೋಟು ಅಮಾನ್ಯಗೊಳಿಸಿದ ಬಳಿಕ ದೇಶದ ಜಿಡಿಪಿಯಲ್ಲಿ ಕುಸಿತವಾಗಲಿದೆ, ಅಭಿವೃದ್ಧಿ ಕುಸಿತವಾಗಲಿದೆ ಎಂಬ ಟೀಕೆಗಳು ಕೆಲವರಿಂದ ಕೇಳಿ ಬಂತು. ಆದರೆ ಅದಕ್ಕೆ ಅಪವಾದ ಎನ್ನುವಂತೆ ದೇಶದ ಆರ್ಥಿಕ ಪ್ರಗತಿ ಸಾಧ್ಯವಾಗಿದೆ, ದೇಶದ ಅಭಿವೃದ್ಧಿ ಸೂಚ್ಯಂಕ ಶೇ.10ಕ್ಕೆ ಏರಿಕೆಯಾಗಲಿದೆ ಎಂದು ಕೇಂದ್ರ ವಿತ್ತ, ಕಾರ್ಪೋ ರೇಟ್ ವ್ಯವಹಾರ ಸಚಿವ ಅರ್ಜುನ್ ರಾಮ್ ಮೆಘಾವಲ್ ತಿಳಿಸಿದ್ದಾರೆ.

ಅಡ್ಯಾರಿನ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಬಗ್ಗೆ ದ.ಕ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಇತ್ತೀಚೆಗೆ ಐಎಂಎಫ್ ವರದಿಯ ಪ್ರಕಾರ ಭಾರತ ಪ್ರಪಂಚದ ನಾಲ್ಕು ಆರ್ಥಿಕವಾಗಿ ಬಲಿಷ್ಠ ದೇಶಗಳಾದ ಜಪಾನ್, ಫ್ರಾನ್ಸ್, ಜರ್ಮನಿ, ಇಂಗ್ಲೆಂಡನ್ನು ಹಿಂದಿಕ್ಕಿ ಸಾಗುತ್ತಿದೆ ಎಂದು ಅರ್ಜುನ್ ರಾಮ್ ಮೆಘಾವಲ್ ತಿಳಿಸಿದ್ದಾರೆ.

ಜಿಡಿಪಿ ಏರಿಕೆಯಾಗಬೇಕಾದರೆ ಕೊಂಡುಕೊಳ್ಳುವ ಸಾಮರ್ಥ್ಯ , ಹೂಡಿಕೆ, ರಪ್ತು ಪ್ರಮಾಣ ಹೆಚ್ಚಬೇಕು. ಈ ನಿಟ್ಟಿನಲ್ಲಿ ಮುದ್ರಾಯೋಜನೆ, ಸ್ಟಾರ್ಟ್ ಅಪ್ ಮತ್ತು ಸ್ಟಾಂಡ್ ಅಪ್ ಯೋಜನೆಗಳು ಜನರ ಆರ್ಥಿಕ ಮಟ್ಟ ಉತ್ತಮ ಪಡಿಸಲು ಸಹಕಾರಿಯಾಗಿದೆ. 2020ರ ಹೊತ್ತಿಗೆ ದೇಶದಲ್ಲಿ ಬಡವ -ಶ್ರೀಮಂತರ ನಡುವಿನ ಆರ್ಥಿಕ ಅಸಮಾನತೆ ಸಾಕಷ್ಟು ಕಡಿಮೆಯಾಗಲಿದೆ ಎಂದು ಅರ್ಜುನ್ ರಾಮ್ ಮೆಘಾವಲ್ ಹೇಳಿದರು.

meghavalವಾಯು ಮಾಲಿನ್ಯ ತಡಗಟ್ಟಲು ಪರಿಸರ ಸ್ನೇಹಿ ವಾಹನ ಬಳಸಲು ಪ್ರಧಾನಿ ಮೋದಿಯವರು ನೀಡಿದ ಕರೆಯಂತೆ ಸರಕಾರದ ನೀತಿಯನ್ನು ಮೊದಲು ನಾವು ಪಾಲಿಸಬೇಕು ಎಂಬ ನಿಟ್ಟಿನಲ್ಲಿ ಪರಿಸರ ಸ್ನೇಹಿಯಾದ ಸೈಕಲಲ್ಲಿ ಲೋಕಸಭೆಗೆ ಬಂದು ಹಾಜರಾದೆ ಎಂದು ಸಚಿವರು ಇದೇ ಸಂದರ್ಭ ನೆನಪಿಸಿಕೊಂಡರು.

ಜಿಲ್ಲೆಯಲ್ಲಿ ಮುದ್ರಾ ಯೋಜನೆಯಡಿ 50,706 ಮಂದಿ ಫಲಾನುಭವಿಗಳು ಸಾಲ ಪಡೆದುಕೊಂಡಿದ್ದು, 702.71 ಕೋಟಿ ರೂ. ಸಾಲ ಬಿಡುಗಡೆಯಾಗಿದೆ. ಪ್ರಧಾನ ಮಂತ್ರಿ ಜನ ಧನ ಯೋಜನೆಯಡಿ ಒಟ್ಟು 3,68,562 ಖಾತೆಗಳನ್ನು ತೆರೆಯಲಾಗಿದ್ದು, ದ.ಕ ಜಿಲ್ಲೆ ದೇಶದ 10 ಪ್ರಥಮ ಜಿಲ್ಲೆಗಳ ಸಾಲಿನಲ್ಲಿ ಸ್ಥಾನ ಪಡೆದಿದೆ. ಸ್ಪಾರ್ಟ್ ಅಪ್ ಮತ್ತು ಸ್ಟಾಂಡ್ ಅಪ್ ಇಂಡಿಯಾ ಯೋಜನೆಯಡಿ ಮಂಜೂರಾದ 80 ಪ್ರಸ್ತಾಪಗಳಿಗೆ 15.54 ಕೋಟಿ ಸಾಲ ಮಂಜೂರಾಗಿದೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ಭಿಮಾ ಯೋಜನೆಯಡಿ 1,23,506 ಖಾತೆ ತೆರೆಯಲಾಗಿದ್ದು, 218 ಪ್ರಕರಣಗಳಲ್ಲಿ 4.36 ಲಕ್ಷ ರೂ. ಮಂಜೂರಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಸಭೆಯಲ್ಲಿ ಶಾಸಕ ಅಂಗಾರ, ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಗೌಡ, ಉಪಾಧ್ಯಕ್ಷೆ ಕಸ್ತೂರಿ ಪಂಜ, ಕಾರ್ಪೋರೇಶನ್ ಬ್ಯಾಂಕ್‌ನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಕುಮಾರ್ ಗರ್ಗ್, ಕರ್ಣಾಟಕ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಆಡಳಿತ ನಿರ್ದೇಶಕ ಮಹಾಬಲೇಶ್ವರ, ಸಿಂಡಿಕೇಟ್ ಬ್ಯಾಂಕ್‌ನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರುಣ್ ಶ್ರೀವಾಸ್ತವ್, ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ವಿರೂಪಾಕ್ಷ ಮೊದಲಾದವರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English