ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಪ್ರಗತಿ ಪರಿಶೀಲನೆ ಸಭೆಯು ಶೈಲಜಾ ಭಟ್ ಅಧ್ಯಕ್ಷತೆಯಲ್ಲಿ ಗುರುವಾರ ಜಿಲ್ಲಾ ಪಂಚಾಯತ್‌ನ ಸಭಾಂಗಣದಲ್ಲಿ ನಡೆಯಿತು. ಹತ್ತು ವರ್ಷಗಳಲ್ಲಿ ಗ್ರಾಮೀಣಾಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅಭಿವೃದ್ಧಿಗೆ ವಿಶೇಷ ಒತ್ತು ನೀಡಿ ಗ್ರಾಮೀಣ ಆರೋಗ್ಯ, ರಸ್ತೆ, ಶಿಕ್ಷಣ ಮತ್ತು ಸಾಮಾಜಿಕವಾಗಿ ಹಿಂದುಳಿದವರ ಅಭಿವೃದ್ಧಿಗೆ ಪೂರಕವಾಗಿ ಜಿಲ್ಲಾ ಪಂಚಾಯತ್‌ನ ಇಲಾಖೆಗಳು ಕ್ರಿಯಾ ಯೋಜನೆ ರೂಪಿಸಬೇಕು ಎಂದು ಅಧ್ಯಕ್ಷರು ಸಭೆಯಲ್ಲಿ ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಕೆ.ಎನ್. ವಿಜಯ್‌ಪ್ರಕಾಶ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಆರೋಗ್ಯ ಇಲಾಖೆ ಜಂಟಿಯಾಗಿ ಕೈಗೊಳ್ಳಬೇಕಾದ ಕ್ರಿಯಾ ಯೋಜನೆಗಳ ಬಗ್ಗೆ ಸಲಹೆ ನೀಡಿದರು. ಎಲ್ಲಾ ಇಲಾಖೆಗಳು ಅಂಗವಿಕಲರಿಗೆ ನೀಡಬೇಕಾದ ಮೀಸಲಾತಿಯನ್ನು ಅನುಷ್ಠಾನಕ್ಕೆ ತನ್ನಿ ಎಂದ ಅವರು, ಇಂದಿರಾ ಆವಾಸ್ ಯೋಜನೆಯಡಿ ನಿಗದಿತ ಗುರಿ ಸಾಧಿಸಲು ಹಾಗೂ ಸಾಧನೆಯಲ್ಲಿ ವಿಫಲವಾಗಿರುವ ಡಾ| ಅಂಬೇಡ್ಕರ್ ಅಭಿವೃದ್ಧಿ ನಿಗಮ ತಮ್ಮ ಸ್ವಯಂ ಉದ್ಯೋಗ ಯೋಜನೆ, ಗಂಗಾ ಕಲ್ಯಾಣ ಯೋಜನೆಗೆ ಗುರಿನಿಗದಿತಪಡಿಸಿ ಸಾಧನೆ ಮಾಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ ಸೂಕ್ತ ಕ್ರಮಕ್ಕೆ ನಿರ್ದೇಶನ ನೀಡಿದರು.
ಅರಣ್ಯ ಇಲಾಖೆ ಅಧಿಕಾರಿಗಳು ಇಲಾಖೆಯ ಪ್ರಸಕ್ತ ಸಾಲಿನ ವಿವಿಧ ವಿನೂತನ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರಲ್ಲದೆ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ 68 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು. ಹಿಂದುಳಿದ ಅಭಿವೃದ್ಧಿ ನಿಗಮ ಹಾಗೂ ಅಲ್ಪಸಂಖ್ಯಾಕ ನಿಗಮದಿಂದ ಚೈತನ್ಯ ಹಾಗೂ ಸ್ವಾವಲಂಬನಾ ಯೋಜನೆಯಡಿ ಈ ತಿಂಗಳಿನಲ್ಲಿ ನಿಗದಿತ ಗುರಿ ಸಾಧಿಸಿದ್ದು, ಶೇ. 55 ಪ್ರಗತಿಯಾಗಿದೆ. ಅಧಿಕ ಇಳುವರಿ ಕಾರ್ಯಕ್ರಮದಡಿ 30,681 ಹೆ. ಭತ್ತದ ಕೃಷಿ ಮಾಡಲಾಗಿದೆ ಎಂದರು.
ತೋಟಗಾರಿಕಾ ಇಲಾಖೆಯು ಫಲಾನುಭವಿಗಳ ಆಯ್ಕೆ ಮತ್ತು ದೂರದೃಷ್ಠಿ ಯೋಜನೆಗಳನ್ನು ರೂಪಿಸಿಕೊಳ್ಳಬೇಕೆಂದು ಸಿಇಒ ಸೂಚಿಸಿದರು. ಪಶು ಸಂಗೋಪನೆ ಮತ್ತು ಕೆಎಂಎಫ್‌ನವರು ಜಂಟಿಯಾಗಿ ಗ್ರಾಮೀಣರಿಗೆ ನೆರವಾಗುವ ಯೋಜನೆಗಳನ್ನು ರೂಪಿಸಲು ಹೇಳಿದರು. ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಸಮಗ್ರ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕೆಂದು ಸೂಚಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಸಭೆಗೆ ಹಾಜರಾಗದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಧನಲಕ್ಷ್ಮೀ ಉಪಸ್ಥಿತರಿದ್ದರು. ಸ್ಥಾಯೀ ಸಮಿತಿ ಸದಸ್ಯ ಜನಾರ್ದನ ಗೌಡ, ಈಶ್ವರ ಕಟೀಲು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English