ಮಂಗಳೂರು: ನನ್ನನ್ನು ನಕಲಿ ಎಂಡೋ ಸಂತ್ರಸ್ತ ಎಂದು ಹೇಳುವ ಮೂಲಕ ಶಾಸಕ ಅಪಮಾನ ಮಾಡಿದ್ದಾರೆ. ಸರ್ಕಾರದ ತಜ್ಞ ವೈದ್ಯರೇ ಅಧಿಕೃತವಾಗಿ ನನ್ನನ್ನು ಎಂಡೋ ಸಂತ್ರಸ್ತನೆಂದು ಘೋಷಿಸಿದ ಮೇಲೂ ಶಾಸಕರು ಆಧಾರ ರಹಿತವಾಗಿ ಆರೋಪ ಮಾಡಿದ್ದಾರೆ. ಇದರಿಂದಾಗಿ ನೊಂದಿದ್ದು, ಕಾನೂನು ರೀತಿಯ ಹೋರಾಟಕ್ಕೂ ನಿರ್ಧರಿಸಿದ್ದೇನೆ. ಅಲ್ಲದೆ ಕಾನತ್ತೂರ್ ಕ್ಷೇತ್ರಕ್ಕೂ ಸತ್ಯಪ್ರಮಾಣಕ್ಕಾಗಿ ಆಹ್ವಾನಿಸುತ್ತಿದ್ದೇನೆ ಎಂದು ಕೊಕ್ಕಡದ ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀಧರ ಗೌಡ ಹೇಳಿದರು.
ವಿಧಾನಸಭೆಯಲ್ಲಿ ಎಂಡೋ ಸಂತ್ರಸ್ತರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಬೆಳ್ತಂಗಡಿ ಶಾಸಕ ವಸಂತ ಬಂಗೇರ ವಿರುದ್ಧ ದೂರು ನೀಡುವುದಾಗಿ ಅವರು ಹೇಳಿದ್ದಾರೆ.
ಎಂಡೋಸಲ್ಫಾನ್ ವೈಮಾನಿಕ ಸಿಂಪಡಣೆಯ ವೇಳೆ 1983ರಲ್ಲಿ ಶಾಸಕರಾಗಿದ್ದಾಗ ಬಂಗೇರ ಅವರು ಇದರ ವಿರುದ್ಧ ಧ್ವನಿ ಎತ್ತದೆ ದುರಂತಕ್ಕೆ ನೇರ ಹೊಣೆಯಾಗಿದ್ದಾರೆ. 2010ರಲ್ಲಿ ಎಂಡೋ ಸಂತ್ರಸ್ತರಿಗೆ ಪರಿಹಾರ ದೊರಕಿಸಿಕೊಡುವಲ್ಲಿಯೂ ಶಾಸಕರು ಮೌನ ವಹಿಸಿದ್ದರು. ಆದರೆ ಕೊಕ್ಕಡದಲ್ಲಿ ಅಮರಣಾಂತ ಉಪವಾಸ ನಡೆಸಿದ್ದ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ವಸಂತ ಬಂಗೇರ, ಈ ಸಮಸ್ಯೆಯನ್ನು ಮುಖ್ಯಮಂತ್ರಿ ಗಮನಕ್ಕೆ ತರುತ್ತೇನೆ. ಅಧಿವೇಶನದಲ್ಲಿ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದ್ದರು. ಇದೀಗ ಸಂತ್ರಸ್ತರ ವಿರುದ್ಧವೇ ತಿರುಗಿ ಬಿದ್ದಿರುವುದು ವಿಪರ್ಯಾಸ ಎಂದರು.
ಶಾಸಕರು ಹೇಳುವಂತೆ ಎಂಡೋ ಸಲ್ಫಾನ್ ಪೀಡಿತರಲ್ಲದ ಯಾರಾದರೂ ಸುಳ್ಳು ದಾಖಲೆಗಳನ್ನು ಸಲ್ಲಿಸಿ ಸರ್ಕಾರದಿಂದ ಪರಿಹಾರ ಪಡೆಯುತ್ತಿರುವುದು ನಿಜವಾದಲ್ಲಿ ಅಂತಹ ಅಕ್ರಮವನ್ನು ಮೊದಲೇ ತಡೆಯಬಹುದಿತ್ತಲ್ಲ. ಇದರಿಂದ ನೈಜ ಸಂತ್ರಸ್ತರಿಗೆ ವಂಚನೆಯಾಗುವುದನ್ನು ತಪ್ಪಿಸುವ ಜವಾಬ್ದಾರಿ ಶಾಸಕರಿಗೆ ಇರಲಿಲ್ಲವೇ? ಹಾಗಾದರೆ ತಜ್ಞ ವೈದ್ಯರು ನೀಡಿರುವುದು ಸುಳ್ಳು ಪ್ರಮಾಣ ಪತ್ರವೇ ಎಂದು ಪ್ರಶ್ನಿಸಬೇಕಾಗಿದೆ ಎಂದರು.
ಎಂಡೋ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುತ್ತೇನೆ ಎಂದು ಹೀರೋನಂತೆ ಮಾತನಾಡುತ್ತಿರುವ ಸಚಿವ ಯು.ಟಿ. ಖಾದರ್ ಅವರು ಹತಾಶೆಯಿಂದ ಬೇಕಾಬಿಟ್ಟಿ ಹೇಳಿಕೆಯನ್ನು ನೀಡುತ್ತಿದ್ದಾರೆ. ಆರೋಗ್ಯ ಸಚಿವ ರಮೇಶ್ ಅವರು ಸಂತ್ರಸ್ತರ ಬಗ್ಗೆ ನೈಜ ಕಾಳಜಿಯನ್ನು ವ್ಯಕ್ತಪಡಿಸಿದರೆ ಅದನ್ನು ತಡೆಯುವ ಕೆಲಸವನ್ನು ಸಚಿವ ಖಾದರ್ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
Click this button or press Ctrl+G to toggle between Kannada and English