ಮಂಗಳೂರು : ದ.ಕ ಕಾರ್ಯನಿರತ ಪತ್ರಕರ್ತರ ಸಂಘ ಭಾನುವಾರ ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ನೂತನ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮಾತನಾಡಿ ಇಂದಿನ ಪರಿಸ್ಥಿತಿಯಲ್ಲಿ ಲೋಕಾಯುಕ್ತ ಸಂಸ್ಥೆಗೆ ಹೆಚ್ಹಿನ ಜವಾಬ್ದಾರಿಯನ್ನು ಕೊಟ್ಟು, ಉತ್ಕೃಷ್ಟ ಸಂಸ್ಥೆಯಾಗಿ ಕೆಲಸ ಮಾಡವಂತೆ ಕ್ರಮ ಕೈಗೊಳ್ಳಲಾಗಿದೆ, ಅದಕ್ಕಾಗಿ ಹೆಚ್ಚಿನ ಅಧಿಕಾರ ನೀಡುವುದು ಸರಿಯಾದ ಕ್ರಮ. ಈ ಬಗ್ಗೆ ಪಕ್ಷದ ಹಿರಿಯರೊಂದಿಗೆ, ಹಿರಿಯ ಸಚಿವರರೊಂದಿಗೆ ಚರ್ಚೆ ಮಾಡಿ, ಕಾನೂನಿನ ಇತಿಮಿತಿಯೊಳಗೆ ಏನು ಮಾಡಲು ಸಾಧ್ಯ ಅನ್ನುವುದನ್ನು ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿಗಳು ನುಡಿದರು.
ಲೋಕಾಯುಕ್ತರ ವರದಿ ಆಧರಿಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿ ನೀಡಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಒಂದು ತಿಂಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಲೋಕಾಯುಕ್ತ ವರದಿಯಲ್ಲಿ ಸಚಿವ ಸೋಮಣ್ಣ ಅವರ ಮೇಲೆ ಯಾವುದೇ ಆರೋಪಗಳಿಲ್ಲ. ವರದಿಯಲ್ಲಿರುವುದು ಬೆಂಗಳೂರು ಸೋಮಣ್ಣ ಅವರ ಪುತ್ರರ ವ್ಯವಹಾರಗಳ ಬಗ್ಗೆ. ಸೋಮಣ್ಣ ಮೇಲೆ ಯಾವುದೇ ಕಳಂಕ ಇಲ್ಲದ ಕಾರಣ ಅವರನ್ನು ಮಂತ್ರಿ ಮಾಡಲಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ವರದಿ ಬಂದ ಬಳಿಕವೇ ಮುಂದಿನ ಕ್ರಮ ಬಗ್ಗೆ ಚರ್ಚಿಸಿ, ಪ್ರತಿಕ್ರಿಯಿಸುತ್ತೇನೆ ಎಂದು ವಿವರಿಸಿದರು.
ತಾಲೂಕು ಮಟ್ಟದಲ್ಲಿ ಯಾವುದೇ ಅರ್ಜಿಯೂ 15 ದಿನಗಳಿಗಿಂತ ಹೆಚ್ಚಿನ ಕಾಲ ಇಟ್ಟುಕೊಳ್ಳುವಂತಿಲ್ಲ. ಪೊಲೀಸ್ ಅಧಿಕಾರಿಗಳೆಂದರೆ ಜನರಿಗೆ ಹೆದರಿಕೆ, ಆ ಪರಿಸ್ಥಿತಿ ಬದಲಾಗಿ ಅವರ ಮೇಲೆ ಗೌರವ ಬರುವಂತಾಗಬೇಕು. ಜನಸ್ನೇಹಿ ಯೋಜನೆಗಳು ತ್ವರಿತವಾಗಿ ಅನುಷ್ಠಾನಗೊಳ್ಳಬೇಕು. ಸರಕಾರಕ್ಕೆ ಸಲ್ಲಿಕೆಯಾಗುವ ಪ್ರತಿಯೊಂದು ಅರ್ಜಿಗೂ ಅಧಿಕಾರಿಗಳು ಸರಿಯಾದ ಉತ್ತರವನ್ನು ನೀಡಬೇಕು ಎಂದು ಸೂಚಿಸಿದ್ದೇನೆ ಆಡಳಿತವನ್ನು ಚುರುಕಗೊಳಿಸುವ ದೃಷ್ಟಿಯಿಂದ ಕೆಲವು ಬದಲಾವಾಣೆಯನ್ನು ಮಾಡಲಾಗುವುದು ಎಂದರು.
ದ.ಕ. ಜಿಲ್ಲೆಗೆ ಹೆಚ್ಚಿನ ಆದ್ಯತೆ ನೀಡಿ ಕೆಲಸ ಮಾಡುವಂತೆ ಅಧಿಕಾರಿಗಳ ಸಭೆಯಲ್ಲಿ ಇಂದು ತಿಳಿಸಿದ್ದೇನೆ. ಜಿಲ್ಲೆಯಲ್ಲಿ ನಡೆಯಬೇಕಿರುವ ಅಭಿವೃದ್ದಿ ಕಾರ್ಯಗಳ ಅದ್ಯತೆಯನ್ನು ಗುರುತಿಸಲಾಗಿದೆ. ಒಂದು ತಿಂಗಳ ಬಳಿಕ ಆ ಬಗ್ಗೆ ಕ್ರಮ ಜರಗಿಸಲಾಗುವುದು. ಯೋಜನೆಗಳಿಗೆ ಹಣಕಾಸಿನ ಸಮಸ್ಯೆಯಾಗದು ಎಂದು ಅವರು ನುಡಿದರು.
ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ.ಪಾಲೆಮಾರ್ ಅವರನ್ನು ಪತ್ರಕರ್ತರ ಸಂಘದ ಪರವಾಗಿ ಸಂಮಾನಿಸಲಾಯಿತು.
ಸಂಘದ ಅಧ್ಯಕ್ಷ ಪಿ.ಬಿ .ಹರೀಶ್‌ಪ್ರಸಾದ್ ರೈ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀನಿವಾಸ ನಾಯಕ್ ಇಂದಾಜೆ ವಂದಿಸಿದರು. ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಶುಭಾಂಶನೆಗೈದರು. ಪತ್ರಕರ್ತ ರವೀಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English