ನಾಗರಪಂಚಮಿ, ಭೂಲೋಕದ ಪ್ರತ್ಯಕ್ಷ ಅಂದರೆ ಕಣ್ಣಿಗೆ ಕಾಣುವ ದೇವರನ್ನು ಪೂಜಿಸುವ ಹಬ್ಬ

12:54 PM, Friday, July 28th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Kaup Govardhan ಮಂಗಳೂರು : ಹಿಂದೂಗಳ ನೈಸರ್ಗಿಕ ಆರಾಧನೆ ಎಂದು ಕರೆಯಲ್ಪಡುವ ನಾಗರಪಂಚಮಿ, ಭೂಲೋಕದ ಪ್ರತ್ಯಕ್ಷ ಅಂದರೆ ಕಣ್ಣಿಗೆ ಕಾಣುವ ದೇವರನ್ನು ಪೂಜಿಸುವ ಹಬ್ಬ ಎಂದು ನಂಬಲಾಗಿದೆ.

ಪರಶುರಾಮ ದೇವರು ಸಮುದ್ರರಾಜನಿಂದ ತುಳುನಾಡನ್ನು ಪಡೆದುಕೊಂಡಾಗ ಅದು ಉಪಯೋಗಕ್ಕೆ ಬಾರದ ಬರಡು ಭೂಮಿಯಾಗಿತ್ತು. ಉಪ್ಪಿನ ಕೋಟೆಯಂತೆ ಇದ್ದ ಭೂಮಿಯನ್ನು ಸಮೃದ್ಧ ಭೂಮಿಯನ್ನಾಗಿಸಿ ಕೊಡಲು ಪರಶುರಾಮ ನಾಗ ರಾಜನನ್ನು ಬೇಡಿಕೊಳ್ಳುತ್ತಾನೆ. ಪರಶುರಾಮನ ಮೊರೆಯನ್ನು ಕೇಳಿದ ನಾಗಗಳು ತಮ್ಮ ದೇಹವನ್ನು ಪಣಕ್ಕೆ ಇಟ್ಟು ಉಪ್ಪಿನ ಕೋಟೆಯನ್ನು ಮೆಟ್ಟಿ ಪಾತಾಳದಿಂದ ಸಿಹಿನೀರು ತರುತ್ತವೆ. ಅಡಿಯಲ್ಲಿದ್ದ ಮೆಕ್ಕಲು ಮಣ್ಣನ್ನು ಬುಡಮೇಲು ಮಾಡುತ್ತವೆ.

ಕರುನಾಡನ್ನು ಕಟ್ಟುವ ಕಾಯಕವನ್ನು ತಪಸ್ಸಾಗಿ ಸ್ವೀಕರಿಸಿದ ನಾಗಗಳು ಉಪ್ಪಿನ ಮೇಲೆ ಹರಿದಾಡಿದಾಗ ದೇಹಕ್ಕೆ ಗಾಯವಾಗುತ್ತದೆ. ಹೀಗೆ ಗಾಯವಾದ ಹಾವುಗಳಿಗೆ ತುಳುವರು ಉರಿಯ ಉಪಶಮನಕ್ಕೆ ಗೆಂದಾಲಿ ಎಲೆನೀರಲ್ಲಿ ಅಭಿಷೇಕ ಮಾಡುತ್ತಾರೆ ಗಾಯಕ್ಕೆ ಹರಶಿಣ ಹಚ್ಚಿ ಅದನ್ನು ತಿಲಕವಿಟ್ಟು ಭಕ್ತಿಯಿಂದ ಆರತಿ ಮಾಡುತ್ತಾರೆ. ನಾಗನನ್ನು ತಮ್ಮ ಕುಲದೆವರಾಗಿ ಸ್ವೀಕರಿಸುತ್ತಾರೆ. ನಾಗನಿಗೆ ತುಳುವರು ಮಾಡಿದ ಆರೈಕೆ ಮುಂದೆ ಆಚರಣೆಯಾಗುತ್ತದೆ. ಗಾಯವನ್ನು ಉಲ್ಬಣಗೊಳಿಸುವ ಗೋಮಯ ಮತ್ತು ಬಾಳೆದಿಂಡು ಇಂದಿಗೂ ನಾಗ ಸೇವೆಯಲ್ಲಿ ನಿಷಿದ್ಧ.

ಕರಾವಳಿ ನಾಡಿನ ಸೃಷ್ಟಿಕರ್ತ ಪರಶುರಾಮನೆ ಆದರೂ ಅದಕ್ಕೆ ಫಲವತ್ತತೆಯನ್ನು ತುಂಬಿದ್ದು ನಾಗಗಳು. ಹೀಗಾಗಿ ನಾವು ನಾಗಗಳಿಂದ ನಮ್ಮ ನಾಡನ್ನು ಪಡೆದು ಕೊಂಡವರಾಗಿದ್ದೇವೆ. ನಾಗ ನೆಲೆಯ ಭೂಮಿಯು ನಮ್ಮದ್ದು ಆಗಿದ್ದರಿಂದ ನಾಗರ ಹಾವು ನಮಗೆ ಕಣ್ಣಿಗೆ ಕಾಣುವ ದೇವರು ಅನ್ನುವ ಅಭಿಮಾನ. ವಿಶೇಷವಾಗಿ ತುಳುನಾಡಿನಲ್ಲಿ ಮುಕ್ಕೋಟಿ ದೇವತೆಗಳಿಂದ ಏನನ್ನು ಪಡೆಯಬಹುದೋ ಅದನ್ನು ನಾಗದೆವರನ್ ಪಡೆಯಬಹುದು ಅನ್ನುತ್ತವೆತು ಜಾನಪದ ಕಥೆಗಳು. ಯಾಕೆಂದರೆ ನಾಗ ಸಂಪತ್ತು ಅನ್ನುವ ನಿಧಿಯ ಒಡೆಯ. ಉತ್ತಮವಾದ ಸ್ವಾಸ್ಥ್ಯವನ್ನು ನೀಡುವ ಆರೋಗ್ಯ ಪ್ರದಾಯಕ. ಸಂತಾನವನ್ನು ಕರುಣಿಸುವವ ಅಲ್ಲದೆ ಜಲ ಸಂಪತ್ತಿನ ಅಧಿಪತಿ. ಇಂತಹ ಮಹಿಮೆಯುಳ್ಳ ನಾಗದೇವರು ಪರಶುರಾಮ ಸೃಷ್ಟಿಯ, ಬೇಡಿದ್ದನ್ನು ನೀಡುವ ಕಾಮಧೇನು ಅನ್ನುವುದರಲ್ಲಿ ಎರಡು ಮಾತಿಲ್ಲ .

ಕಾಪು ಬಳಿಯ ಮಜೂರು ಗ್ರಾಮದ ವಾಸುಕಿ ನಿಲಯ ಎಂಬಲ್ಲಿಯ ನಿವಾಸಿ ಗೋವರ್ಧನ ರಾವ್ ಎಂಬವರು ಜೀವಂತ ನಾಗನಿಗೆ ಸೀಯಾಳ ಅಭಿಷೇಕ ಅರ್ಪಿಸಿ ಪ್ರತಿ ವರ್ಷದಂತೆಯೂ ಈ ಬಾರಿ ಯಾವುದೇ ಪ್ರಚಾರ ಇಲ್ಲದೆ ಜೀವಂತ ನಾಗನಿಗೆ ಸೀಯಾಳ, ಹಾಲು ಹಾಗೂ ಅರಸಿನ ಹುಡಿಯನ್ನು ಎರೆದು ಪೂಜೆ ಮಾಡಿದ್ದಾರೆ. ಈ ಕಾರ್ಯವು ಸುಮಾರು 25 ವರ್ಷಗಳಿಂದ ನಿರಂತರವಾಗಿ ಸಾಗಿ ಬಂದರೂ ಪ್ರಚಾರವಾಗಿರಲಿಲ್ಲ.

ಈ ಬಗ್ಗೆ ಅವರ ಸಂಬಂಧಿಯೊಬ್ಬರು ಮಾತನಾಡಿ, ಇಲೆಕ್ಟ್ರಿಶಿಯನ್ ಹಾಗೂ ಕ್ಯಾಟರಿಂಗ್ ಸೇವೆ ಸಲ್ಲಿಸುತ್ತಿರುವ ಗೋವರ್ಧನ ರಾವ್, ಕಳೆದ 25 ವರ್ಷಗಳಿಂದ ಎಲ್ಲೋ ಗಾಯಗೊಂಡ ನಾಗನನ್ನು ಇಲ್ಲಿಗೆ ತಂದು ಶುಶ್ರೂಶೆ ಮಾಡುತ್ತಾರೆ. ವರ್ಷಕ್ಕೆ ಸುಮಾರು 20ರಿಂದ 25 ನಾಗರ ಹಾವುಗಳನ್ನು ಶುಶ್ರೂಶೆ ಮಾಡಿ ಕಾಡಿನಲ್ಲಿ ಬಿಡುವುದು ಇವರ ಕಾಯಕ ಎನ್ನುತ್ತಾರೆ.

ಗೋವರ್ಧನ ರಾವ್‌‌‌ಗೆ ನಾಗ ಎಂದರೆ ಅತ್ಯಂತ ಪ್ರೀತಿ ಪಾತ್ರವಾದ ಜೀವ. ರಸ್ತೆಯಲ್ಲಿ ಎಲ್ಲೇ ಹಾವುಗಳು ಗಾಯಗೊಂಡು ಬಿದ್ದರೂ ಮೊದಲಿಗೆ ಗೋವರ್ಧನ ರಾವ್‌‌‌ಗೆ ದೂರವಾಣಿ ಕರೆ ಬರುತ್ತದೆ. ಯಾವುದೇ ಹೊತ್ತು-ಗೊತ್ತು ಎನ್ನದೇ ಗಾಯಗೊಂಡ ನಾಗರ ಹಾವು ಇರುವ ಸ್ಥಳಕ್ಕೆ ದೌಡಾಯಿಸುತ್ತಾರೆ. ಪೂರ್ಣವಾಗಿ ಗುಣಮುಖಗೊಂಡ ಹಾವನ್ನು ಮತ್ತೆ ಕಾಡಿಗೆ ಸೇರಿಸಿ ಕೃತಾರ್ಥರಾಗುತ್ತಾರೆ. ಕೆಲವೊಂದು ಹಾವುಗಳ ಗಾಯ ಸಂಪೂರ್ಣ ಗುಣಮುಖವಾಗಲು ವರ್ಷಗಳೇ ಕಳೆದಿದೆಯಂತೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English