ಮಂಗಳೂರು : ರಾಷ್ಟ್ರ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಆಟಗಾರ್ತಿ, ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾ ಅವರ ಮರಣೋತ್ತರ ಪರೀಕ್ಷೆಯ ವರದಿ ಪೊಲೀಸ್ ಕೈ ಸೇರಿದೆ
ಪ್ರಕರಣದ ತನಿಖೆಯ ನೇತೃತ್ವ ವಹಿಸಿರುವ ಎಸಿಪಿ ರಾಜೇಂದ್ರ ಡಿ.ಎಸ್. ನೇತೃತ್ವದ ತಂಡದ ಕೈ ಸೇರಿರುವ ಈ ವರದಿಯಲ್ಲಿ ಕಾವ್ಯಾಳದ್ದು ಆತ್ಮಹತ್ಯೆ ಎಂದು ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
ಈ ನಡುವೆ ಮರಣೋತ್ತರ ಪರೀಕ್ಷೆಯ ವರದಿಯ ಬಗ್ಗೆ ಎಸಿಪಿ ನೇತೃತ್ವದ ತನಿಖಾ ತಂಡವು ಕೂಲಂಕಷ ಪರಿಶೀಲನೆ ನಡೆಸುತ್ತಿದೆ.
ಕಟೀಲು ಸಮೀಪದ ಎಕ್ಕಾರು ದೇವಗುಡ್ಡೆ ನಿವಾಸಿ ಲೋಕೇಶ್ ಪೂಜಾರಿ ಎಂಬವರ ಪುತ್ರಿಯಾಗಿದ್ದ ಕಾವ್ಯಾ ಮೃತದೇಹ ಜು.20ರಂದು ರಾತ್ರಿ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಸೇರಿದ ಹಾಸ್ಟೆಲ್ ನಲ್ಲಿ ಕೊರಳಿಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಕಾವ್ಯಾ ಸಾವಿನ ಬಗ್ಗೆ ಅವರ ಹೆತ್ತವರು, ವಿದ್ಯಾರ್ಥಿ ವಲಯ, ಸಾರ್ವಜನಿಕ ರಿಂದ ವ್ಯಾಪಕ ಶಂಕೆ ವ್ಯಕ್ತವಾಗಿದ್ದು, ಸಮಗ್ರ ತನಿಖೆ ಒಕ್ಕೊರಳ ಆಗ್ರಹ ಕೇಳಿಬಂದಿದೆ. ಈ ನಡುವೆ ಹೆತ್ತವರು ದೂರಿನ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ತನಿಖೆಗೆ ಆದೇಶಿಸಿದ್ದಾರೆ. ಇದಕ್ಕಾಗಿ ಎಸಿಪಿ ರಾಜೇಂದ್ರ ಡಿ.ಎಸ್. ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿದಿದ್ದು, ಶನಿವಾರ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಸಹಿತ ಆರು ಮಂದಿ ವಿದ್ಯಾರ್ಥಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
Click this button or press Ctrl+G to toggle between Kannada and English