ಮಂಗಳೂರು: ಕಲ್ಲಡ್ಕ ಶಾಲೆಗಳಿಗೆ ಅನ್ನದಾನದ ಅನುದಾನ ಕಡಿತಗೊಳಿಸಿದ್ದು ತಪ್ಪು. ಮಕ್ಕಳ ಊಟವನ್ನು ಸರ್ಕಾರ ಕಸಿದುಕೊಂಡಿದೆ. ಸಚಿವ ರಮಾನಾಥ್ ರೈ ಮತ್ತು ಮುಖ್ಯಮಂತ್ರಿ ಈ ಇಬ್ಬರಿಗೂ ಶನಿ ಹಿಡಿದಿರಬೇಕು! ರೈ ಮಾಡಿದ ತಪ್ಪನ್ನು ದೇವರೂ ಸಹ ಕ್ಷಮಿಸೋದಿಲ್ಲ. ಸಚಿವ ರೈ ಸಿಎಂ ಕಾಲು ಹಿಡಿದು ಕ್ಷಮಾಪಣೆ ಕೇಳಲಿ. ಅನುದಾನದ ನಿಷೇಧದ ಆದೇಶವನ್ನು ಹಿಂಪಡೆಯಬೇಕು. ಶಾಲೆಯಲ್ಲಿ ಅನ್ನದಾನವನ್ನು ಮುಂದುವರೆಸಬೇಕೆಂದು ಪೂಜಾರಿ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೂಜಾರಿ. ಸಿಎಂ ಸಿದ್ದರಾಮಯ್ಯಗೆ ಬರಪೀಡಿತ ಪ್ರದೇಶಗಳಿಗೆ ಭೇಟಿ ನಿಡೋಕೆ ಸಮಯ ಸಿಗುತ್ತಿಲ್ಲ. ರಾಜ್ಯದ ಜನರ ಬೇಡಿಕೆಗಳನ್ನು ಈಡೇರಿಸದಿದ್ದರೆ, ನಿಮಗೆ ಸಮಯ ಸಿಗದಿದ್ದರೆ ರಾಜೀನಾಮೆ ನೀಡಿ ಎಂದು ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಒತ್ತಾಯಿಸಿದ್ದಾರೆ.
ಹಗಲಿನಲ್ಲಿ ನಿಮಗೆ ಸಮಯ ಇರಲ್ಲ. ರಾತ್ರಿ ನಿಮಗೆ ಏನು ಕೆಲಸವಿದೆ? ರಾತ್ರಿ ಇಸ್ಪೀಟ್ ಆಡ್ತೀರಾ? ಇಲ್ಲಾ ಬೇರೆ ಏನಾದ್ರೂ ಅಭ್ಯಾಸ ಇದ್ಯಾ? ನಿಮಗೆ ರಾಜ್ಯಭಾರ ಮಾಡೋಕೆ ಆಗಲ್ವಾ? ರಾಜ್ಯದ ಜನ ನಿಮ್ಮ ಉತ್ತರದ ನಿರೀಕ್ಷೆಯಲ್ಲಿದ್ದಾರೆ. ನಿಮಗೆ ಕಾಲ ಸನ್ನಿಹಿತವಾಗಿದೆ.
ಇಂಧನ ಸಚಿವ ಡಿ.ಕೆ.ಶಿವಕುಮಾರ್ ನಿಮ್ಮಿಂದ ಪ್ರಬಲವಾಗುತ್ತಿದ್ದಾರೆ. ರಾಜ್ಯದ ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎನ್ನಲಾಗುತ್ತಿದೆ. ನೀವು ನಿದ್ದೆಯಿಂದ ಎಚ್ಚೆತ್ತುಕೊಳ್ಳದಿದ್ದರೆ ತುಂಬಾ ಕಷ್ಟ ಅನುಭವಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪೂಜಾರಿ ವಾಗ್ದಾಳಿ ನಡೆಸಿದರು.
ಅಮಿತ್ ಶಾ ರಾಜ್ಯಕ್ಕೆ ಬಂದಿದ್ದಾರೆ. ಅವರು ಬಂದಿರೋದು ನಿಮ್ಮನ್ನು ಕೆಳಗೆ ಇಳಿಸೋಕೆ. 18 ರಾಜ್ಯಗಳಿಗೆ ಶಾ ಭೇಟಿ ನೀಡಿದ್ದಾರೆ. ಎಲ್ಲಕಡೆ ಮುಖ್ಯಮಂತ್ರಿಗಳನ್ನು ಕೆಳಗೆ ಇಳಿಸಿದ್ದಾರೆ. ನಿಮ್ಮನ್ನೂ ಕೆಳಗೆ ಇಳಿಸಲಿದ್ದಾರೆ. ಸಂಜೆಯೊಳಗೆ ರಾಜೀನಾಮೆ ನೀಡಿ. ದಲಿತ ಮುಖ್ಯಮಂತ್ರಿಯನ್ನು ರಾಜ್ಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಲಿ ಎಂದರು.
ನಟ ಉಪೇಂದ್ರ ಅವರ ವಿಭಿನ್ನ ಆಲೋಚನೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಪೂಜಾರಿ, ಅವರ ಪ್ರಶ್ನೆಗಳಿಗೆ ರಾಜ್ಯದ ಜನ ತಲೆಬಾಗಬೇಕು. ನಾನೂ ಕೂಡಾ ತಲೆಬಾಗುತ್ತೇನೆ. ನೀವು ಬೇರೆ ಪಾರ್ಟಿಗಳಿಗೆ ಸೇರ್ಪಡೆಯಾಗಬೇಡಿ. ಹೊಸ ಪಕ್ಷವನ್ನು ಕಟ್ಟಿ. ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಇಲ್ಲದಿದ್ದರೆ ರಾಜಕಾರಣಿಗಳಿಗೆ ಯಾರ ಭಯವೂ ಇರುವುದಿಲ್ಲ ಎಂದು ಪೂಜಾರಿ ಅವರು ನಟ ಉಪೇಂದ್ರಗೆ ಸಲಹೆ ನೀಡಿದ್ದಾರೆ.
Click this button or press Ctrl+G to toggle between Kannada and English