ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ 9ನೆ ಅವಧಿಯ ಅಧ್ಯಕ್ಷ ಎ.ಸಿ. ಭಂಡಾರಿ ಮತ್ತು ಸದಸ್ಯರು ನಗರದ ಉರ್ವಸ್ಟೋರ್‌ನಲ್ಲಿರುವ ತುಳುಭವನದಲ್ಲಿ ಶನಿವಾರ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭ ಮಾತನಾಡಿದ ಪ್ರೊ. ಬಿ.ಎ.ವಿವೇಕ ರೈ, ತುಳು ಭಾಷೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸುವ ಸಲುವಾಗಿ ಮತ್ತು ಭಾಷೆಯ ಬೆಳವಣಿಗೆಗೆ ಸಾಫ್ಟ್‌ವೇರ್ ಬಳಕೆ ಮಾಡಬೇಕಾಗಿದೆ ಎಂದು ಹೇಳಿದರು.
ಅಂತರ್ಜಾಲದಲ್ಲೂ ಕೂಡ ತುಳು ಭಾಷೆಗಾಗಿ ಕೆಲಸ ಕಾರ್ಯ ನಡೆಯುತ್ತಿದೆ. ತುಳು ವಿಕಿಪೀಡಿಯಾ ಭಾಷೆಯ ಬೆಳವಣಿಗೆಗೆ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಅಕಾಡಮಿಯು ನಾಟಕ, ಸಿನೆಮಾ, ಸಾಂಸ್ಕೃತಿಕ, ಅನುವಾದ, ಸಾಫ್ಟ್‌ವೇರ್ ಇತ್ಯಾದಿಯಾಗಿ ಪ್ರತ್ಯೇಕ ತಂಡ ಕಟ್ಟಿಕೊಂಡು ಕೆಲಸ ಮಾಡಬೇಕಾಗಿದೆ ಎಂದು ಪ್ರೊ. ಬಿ.ಎ. ವಿವೇಕ ರೈ ನುಡಿದರು.
ರೋಮನ್ ಲಿಪ್ಯಂತರ ಬಳಸಿಕೊಂಡು ತುಳು ಭಾಷೆಯನ್ನು ಬೆಳೆಸಬೇಕಿದೆ. ಸಾಫ್ಟ್‌ವೇರ್ ಕ್ಷೇತ್ರದ ಅನೇಕ ಉತ್ಸಾಹಿ ಯುವಕರು ತುಳು ಭಾಷೆಗಾಗಿ ಕೆಲಸ ಮಾಡಲು ಸಿದ್ಧರಿದ್ದಾರೆ. ಅಕಾಡಮಿಯು ಕಲೆ, ಸಂಸ್ಕೃತಿಗೆ ಮಾತ್ರ ಸೀಮಿತಗೊಳ್ಳದೆ ಅನುವಾದ, ವ್ಯಾಕರಣ ಇತ್ಯಾದಿ ಅಕಡಮಿಕ್ ಕೆಲಸಕ್ಕೆ ಆದ್ಯತೆ ನೀಡಬೇಕು. ತುಳು ಸಾಹಿತ್ಯವನ್ನು ಇಂಗ್ಲಿಷ್ ಸಹಿತ ಇತರ ಭಾಷೆಗಳಿಗೆ ಅನುವಾದಕ್ಕೆ ಪ್ರೋತ್ಸಾಹ ನೀಡಬೇಕು ಎಂದು ವಿವೇಕ ರೈ ಹೇಳಿದರು.
ನಿಕಟಪೂರ್ವ ಅಧ್ಯಕ್ಷೆ ಜಾನಕಿ ಬ್ರಹ್ಮಾವರ ಅವರು ಅಧಿಕಾರ ಹಸ್ತಾಂತರಿಸಿದರು. ನೂತನ ಅಧ್ಯಕ್ಷ ಎ.ಸಿ. ಭಂಡಾರಿ ಮಾತನಾಡಿ ತುಳು ಸಾಹಿತಿಗಳು, ಕಲಾವಿದರು, ವಿದ್ವಾಂಸರನ್ನು ಜತೆಗೂಡಿಸಿಕೊಂಡು ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ತುಳು ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಲಾಗುವುದು ಎಂದರು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಶಾಸಕರಾದ ಅಭಯಚಂದ್ರ ಜೈನ್, ಬಿ.ಎ. ಮೊಯ್ದಿನ್ ಬಾವಾ, ಮೇಯರ್ ಕವಿತಾ ಸನಿಲ್ ಶುಭ ಹಾರೈಸಿದರು.
ಡಾ. ವಾಮನ ನಂದಾವರ, ಸೀತಾರಾಮ ಕುಲಾಲ್, ಜಾಗತಿಕ ಬಂಟರ ಸಂಘದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ, ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ದೇವಾಡಿಗ, ಮುಡಾ ಅಧ್ಯಕ್ಷ ಸುರೇಶ್ ಬಲ್ಲಾಳ್, ಮನಪಾ ಸಚೇತಕ ಶಶಿಧರ ಹೆಗ್ಡೆ, ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ, ನೂತನ ಸದಸ್ಯರಾದ ಸುಧಾ ನಾಗೇಶ್, ವಿಜಯಾ ಶೆಟ್ಟಿ, ತಾರಾನಾಥ ಗಟ್ಟಿ ಕಾಪಿಕಾಡು, ಗೋಪಾಲ್ ಅಂಚನ್, ವಿದ್ಯಾಶ್ರೀ, ದುರ್ಗಾ ಮೆಮನ್, ಶಿವಾನಂದ ಕರ್ಕೇರಾ, ಬೆನೆಟ್ ಅಮ್ಮಣ್ಣ. ಚಂದ್ರಶೇಖರ ಗಟ್ಟಿ ಬೋಳೂರು, ಡಾ. ವಾಸುದೇವ ಬೆಳ್ಳೆ, ನಿರಂಜನ ರೈ ಮಠಂತಬೆಟ್ಟು, ಡಾ. ವೈ.ಎನ್. ಶೆಟ್ಟಿ ಉಪಸ್ಥಿತರಿದ್ದರು.
ಅಕಾಡಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಸ್ವಾಗತಿಸಿದರು. ಅಕಾಡಮಿಯ ಮಾಜಿ ಸದಸ್ಯರಾದ ಡಿ.ಎಂ. ಕುಲಾಲ್ ನೂತನ ಅಧ್ಯಕ್ಷರ ಪರಿಚಯ ಮಾಡಿದರು. ದುರ್ಗಾಪ್ರಸಾದ್ ರೈ ಕುಂಬ್ರ ಕಾರ್ಯಕ್ರಮ ನಿರೂಪಿಪಿಸಿದರು.
Click this button or press Ctrl+G to toggle between Kannada and English