ಮಂಗಳೂರು: ನಗರ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕೋಳಿ ಮಾಂಸ ತ್ಯಾಜ್ಯ ಹಾಗೂ ಎಳನೀರು ಚಿಪ್ಪುಗಳ ಪ್ರತ್ಯೇಕ ವಿಲೇವಾರಿಯನ್ನು ಒಂದು ವರ್ಷದ ಅವಧಿಗೆ ಹೊರಗುತ್ತಿಗೆ ನೀಡುವ ಮಹಾನಗರ ಪಾಲಿಕೆಯ ಪ್ರಸ್ತಾವನೆ ಇನ್ನೂ ಜಾರಿಗೊಳ್ಳುವ ಲಕ್ಷಣಗಳಿಲ್ಲ.
ಕೋಳಿ ಮಾಂಸ ಹಾಗೂ ಎಳನೀರಿನ ತ್ಯಾಜ್ಯಗಳನ್ನು ಈಗ ಇತರ ತ್ಯಾಜ್ಯಗಳೊಂದಿಗೆ ಆ್ಯಂಟೊನಿ ಸಂಸ್ಥೆಯೇ ವಿಲೇವಾರಿಗೊಳಿಸುತ್ತಿದೆ. ನಿಯಮ ಪ್ರಕಾರ ಇದನ್ನು ಬೇರೆಯವರಿಗೆ ಕೊಡಲಾಗದು. ಜತೆಗೆ ಅನುದಾನ ಲಭ್ಯತೆಯಲ್ಲೂ ವ್ಯತ್ಯಾಸವಾಗಲಿದೆ ಎಂಬ ಕಾರಣ ನೀಡಿ ಸಾರ್ವಜನಿಕ ಆರೋಗ್ಯ ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಈ ಪ್ರಸ್ತಾವವನ್ನು ಕೈಬಿಡುವಂತೆ ಶಿಫಾರಸ್ಸು ಮಾಡಿದೆ. ಆದರೆ, ಇದರ ಬಗ್ಗೆ ಸುದೀರ್ಘ ಅಧ್ಯಯನ ಹಾಗೂ ಕಾನೂನು ಮಾಹಿತಿ ಪಡೆದು ಮುಂದಿನ ನಿರ್ಧಾರ ಕೈಗೊಳ್ಳಲು ಪರಿಗಣಿಸಬೇಕು ಎಂದು ಪಾಲಿಕೆ ಸಭೆ ಅಭಿಪ್ರಾಯಪಟ್ಟಿದೆ.
ಎಲ್ಲ ವಾರ್ಡ್‌ಗಳಲ್ಲಿನ ಕೋಳಿ ಮತ್ತು ಇತರ ಮಾಂಸ ಮಾರಾಟ ಮಳಿಗೆಗಳಲ್ಲಿನ ತ್ಯಾಜ್ಯಗಳನ್ನು ಹಾಗೂ ಎಳನೀರು ಚಿಪ್ಪು/ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಸಾಗಿಸಲು ಪ್ರತ್ಯೇಕ ಹೊರಗುತ್ತಿಗೆ ನೀಡುವ ಕುರಿತು ಟೆಂಡರ್ ಕರೆಯಲು ಸಭೆಯಲ್ಲಿ ಪ್ರಸ್ತಾಪವಾಗಿತ್ತು. ಇದನ್ನು ಜೂ. 29ರಂದು ಸಾರ್ವಜನಿಕ ಆರೋಗ್ಯ ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಪರಿಗಣನೆಗೆ ಕಳುಹಿಸಲು ನಿರ್ಧರಿಸಲಾಗಿತ್ತು. ಸ್ಥಾಯಿ ಸಮಿತಿ ಸಭೆ ನಡೆಸಿ, ಈ ಪ್ರಸ್ತಾವವನ್ನು ಕೈಬಿಡಲು ಪರಿಷತ್ತಿಗೆ ಶಿಫಾರಸ್ಸು ಮಾಡಲು ನಿರ್ಣಯಿಸಿತು. ಆದರೆ ಪಾಲಿಕೆ ಸಭೆಯಲ್ಲಿ ಬಹುತೇಕ ಸದಸ್ಯರು ಇದನ್ನು ಕೈಬಿಡಬಾರದು, ಇನ್ನಷ್ಟು ವಿವರವಾಗಿ ಚರ್ಚಿಸಿ ನಿರ್ಣಯಿಸಲು ಮುಂದೂಡಬೇಕು ಎಂದು ಆಗ್ರಹಿಸಿದರು. ಈ ಹಿನ್ನೆಲೆಯಲ್ಲಿ ವಿಷಯ ಇತ್ಯರ್ಥಕ್ಕೆ ಇನ್ನಷ್ಟು ದಿನ ಕಾಯಬೇಕಿದೆ.
ಪ್ರಸ್ತುತ ಮೆ| ಆಂಟೋನಿ ವೇಸ್ಟ್ ಹ್ಯಾಂಡ್ಲಿಂಗ್‌ಸೆಲ್ ಪ್ರೈ.ಲಿ. ಸಂಸ್ಥೆ ಸಮಗ್ರ ಘನ ತ್ಯಾಜ್ಯ ನಿರ್ವಹಣೆ ಕೈಗೊಂಡಿದೆ. ಕೋಳಿ ಮತ್ತು ಇತರೆ ಮಾಂಸ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಲು 6 ಟಿಪ್ಪರ್ ಗಳನ್ನು ಬಳಸುತ್ತಿದ್ದು, ವೇ ಬ್ರಿಜ್ ದಾಖಲೆಗಳ ಪ್ರಕಾರ ದಿನಕ್ಕೆ ಸರಾಸರಿ 31 ಟನ್ ಸಂಗ್ರಹವಾಗುತ್ತಿದೆ. ಇದನ್ನು ಹೊರಗುತ್ತಿಗೆ ಮೇರೆಗೆ ನಿರ್ವಹಿಸಲು ವಾರ್ಷಿಕ 90.10 ಲಕ್ಷ ರೂ. (ಸೇವಾ ಶುಲ್ಕ ಹೊರತುಪಡಿಸಿ) ತಗುಲಲಿದೆ.
ಅಂದಾಜು ಪಟ್ಟಿಯಂತೆ ಪ್ರತ್ಯೇಕ ಸಂಗ್ರಹಣೆಗೆ ಪ್ರತೀ ಟನ್‌ಗೆ 769.29 ರೂ. ವೆಚ್ಚವಾಗಲಿದೆ. ಈಗಿನ ಒಟ್ಟು ತ್ಯಾಜ್ಯದ ಪೈಕಿ 20 ಸಾವಿರ ಎಳನೀರು ಚಿಪ್ಪುಗಳು ಬರುತ್ತಿದ್ದು, ಅಂದಾಜು 18ರಿಂದ 20 ಟನ್ ತೂಗುತ್ತವೆ.ಇದರ ಹೊರಗುತ್ತಿಗೆ ವೆಚ್ಚ ವರ್ಷಕ್ಕೆ 42.25 ಲಕ್ಷ ರೂ. (ಸೇವಾ ಶುಲ್ಕ ಹೊರತುಪಡಿಸಿ) ಆಗಲಿದೆ. ಅಂದರೆ, ಪ್ರತಿ ಟನ್‌ಗೆ 619.86 ರೂ. ಆಗಲಿದೆ.
Click this button or press Ctrl+G to toggle between Kannada and English