ಮಂಗಳೂರು: ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ವಿವಿಧ ಹಂತಗಳಲ್ಲಿ ಸರಳೀಕರಣ ಮಾಡಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದು, ಎರಡನೇ ಹಂತದ ಸುಧಾರಣಾ ಕ್ರಮಗಳನ್ನು ಶೀಘ್ರದಲ್ಲಿ ಪ್ರಕಟಿಸಲಾಗುತ್ತದೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್‌ಕುಮಾರ್ ಕಟೀಲ್ ತಿಳಿಸಿದರು.
ನಗರದ ಡೊಂಗರಕೇರಿಯ ಕೆನರಾ ಪ್ರೌಢಶಾಲೆಯ ಸಭಾಂಗಣದಲ್ಲಿ ಶನಿವಾರ ನಡೆದ ‘ಜಿಎಸ್‌ಟಿ: ಸಾಧಕ– ಬಾಧಕ’ ಕುರಿತ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ‘ಅಕ್ಟೋಬರ್ 13ರ ಬಳಿಕ ಮೊದಲ ಹಂತದ ಸುಧಾರಣಾ ಕ್ರಮಗಳನ್ನು ಪ್ರಕಟಿಸಲು ಪ್ರಧಾನಿ ನಿರ್ಧರಿಸಿದ್ದರು. ಆದರೆ, ಮಾರುಕಟ್ಟೆಯಲ್ಲಿನ ಏರಿಳಿತಗಳಿಗೆ ಸ್ಪಂದಿಸಿ ಶುಕ್ರವಾರವೇ ಪ್ರಕಟಿಸಿದ್ದಾರೆ’ ಎಂದರು.
ಸುಧಾರಣಾ ಕ್ರಮಗಳನ್ನು ಜಾರಿಗೆ ತರುವುದಕ್ಕಾಗಿಯೇ ಜನಾಭಿಪ್ರಾಯ ಸಂಗ್ರಹಿಸುವಂತೆ ಸಂಸದರಿಗೆ ಪ್ರಧಾನಿ ಸೂಚನೆ ನೀಡಿದ್ದಾರೆ. ಜನರ ಭಾವನೆಗಳನ್ನು ಆಧರಿಸಿ ತೆರಿಗೆ ನೀತಿಯಲ್ಲಿ ಸುಧಾರಣೆ ತರುವುದು ಮೋದಿಯವರ ಆಶಯ. ವಿವಿಧ ವರ್ಗದ ಜನರ ಬೇಡಿಕೆಗಳನ್ನು ಆಧರಿಸಿ ತೆರಿಗೆ ಪದ್ಧತಿಯನ್ನು ಸರಳೀಕರಿಸುವ ಕ್ರಮಗಳನ್ನು ನಿರ್ಧರಿಸಲಾಗುತ್ತದೆ ಎಂದು ಹೇಳಿದರು. ಲೆಕ್ಕಪರಿಶೋಧಕ ಜಗನ್ನಾಥ ಕಾಮತ್ ಮಾತನಾಡಿ, ‘ಶುಕ್ರವಾರ ಪ್ರಕಟಿಸಿರುವ ಸುಧಾರಣಾ ಕ್ರಮಗಳಲ್ಲಿ ಹೆಚ್ಚಿನವು ಸಣ್ಣ ವ್ಯಾಪಾರಿಗಳಿಗೆ ಅನುಕೂಲವಾಗುವಂತಿವೆ. ಹೊಸ ಕಾನೂನುಗಳನ್ನು ಜಾರಿಗೊಳಿಸಿದಾಗ ತೊಡಕುಗಳು ಇರುತ್ತವೆ. ಅವುಗಳನ್ನು ಮೀರುವುದೇ ಸವಾಲು’ ಎಂದರು.
ರಿಯಲ್ ಎಸ್ಟೇಟ್ ಉದ್ಯಮಿಗಳ ಪರವಾಗಿ ಮನವಿ ಸಲ್ಲಿಸಿದ ಕ್ರೆಡಾಯ್ ಮಂಗಳೂರು ಘಟಕದ ಅಧ್ಯಕ್ಷ ಡಿ.ಬಿ.ಮೆಹ್ತಾ, ‘ಜಿಎಸ್‌ಟಿ ಮತ್ತು ರೇರಾ ಜಾರಿಯಿಂದ ರಿಯಲ್ ಎಸ್ಟೇಟ್ ಉದ್ದಿಮೆ ಪಾತಾಳಕ್ಕೆ ಕುಸಿದಿದೆ. ಈವೆರಗೂ ಸ್ಥಿರಾಸ್ತಿ ವ್ಯಾಪಾರದ ಮೇಲೆ ಶುಲ್ಕ ವಿಧಿಸುವ ಅವಕಾಶ ರಾಜ್ಯ ಸರ್ಕಾರಕ್ಕೆ ಮಾತ್ರ ಇತ್ತು. ಈಗ ಸಂವಿಧಾನಕ್ಕೆ ವಿರುದ್ಧವಾಗಿ ಕೇಂದ್ರ ಸರ್ಕಾರ ತೆರಿಗೆ ವಿಧಿಸುತ್ತಿದೆ. ಈ ಕ್ರಮವನ್ನು ಕೈಬಿಡಬೇಕು’ ಎಂದು ಆಗ್ರಹಿಸಿದರು.
ಜಿಎಸ್‌ಟಿ ಮತ್ತು ರೇರಾ ಜಾರಿಯಾದ ಬಳಿಕ ಹೊಸ ಕಟ್ಟಡಗಳ ನಿರ್ಮಾಣ ಬಹುತೇಕ ಸ್ಥಗಿತಗೊಂಡಿದೆ. ಯಾರೋ ಮಾಡಿದ ವಹಿವಾಟಿಗೆ ಇನ್ಯಾರೋ ತೆರಿಗೆ ಪಾವತಿಸಬೇಕಾದಂತಹ ಕ್ರಮಗಳು ಈಗಿನ ನೀತಿಯಲ್ಲಿ ಇರುವುದು ಇದಕ್ಕೆ ಕಾರಣ. ರಿಯಲ್ ಎಸ್ಟೇಟ್ ಉದ್ಯಮಕ್ಕೆ ಧಕ್ಕೆಯಾಗುವ ನಿಯಮಗಳನ್ನು ಕೈಬಿಡಬೇಕು ಎಂದು ಮನವಿ ಮಾಡಿದರು. ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ (ಕೆಸಿಸಿಐ) ಪರವಾಗಿ ಮನವಿ ಸಲ್ಲಿಸಿದ ಕೆಸಿಸಿಐ ಅಧ್ಯಕ್ಷೆ ವತಿಕಾ ಪೈ, ‘ಸಣ್ಣ ವ್ಯಾಪಾರಿಗಳಿಗೆ ನೀಡಿರುವ ರಿಯಾಯಿತಿಗಳ ಮಾದರಿಯಲ್ಲೇ ದೊಡ್ಡ ವ್ಯಾಪಾರಿಗಳಿಗೂ ಕೆಲವು ಸೌಲಭ್ಯಗಳನ್ನು ನೀಡಬೇಕು. ಲೆಕ್ಕಪತ್ರ ಸಲ್ಲಿಕೆಯಲ್ಲಿ ಸರಳವಾದ ವಿಧಾನಗಳನ್ನು ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು.
‘ಕರ್ನಾಟಕದಲ್ಲಿ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ವ್ಯವಸ್ಥೆಯಲ್ಲಿ ಲೆಕ್ಕಪತ್ರ ಸಲ್ಲಿಕೆಗೆ ಸರಳವಾದ ವಿಧಾನ ಇತ್ತು. ಅದೇ ಮಾದರಿಯನ್ನು ಜಿಎಸ್‌ಟಿಯಲ್ಲಿ ಅಳವಡಿಸಿಕೊಳ್ಳಬೇಕು. ಜಿಎಸ್‌ಟಿ ತಂತ್ರಾಂಶದಲ್ಲಿ ಸಣ್ಣ ಉದ್ದಿಮೆದಾರರಿಗೂ ಅನುಕೂಲವಾಗುವಂತೆ ಬದಲಾವಣೆ ಗಳನ್ನು ಮಾಡಬೇಕು’ ಎಂದು ಕೆನರಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಗೌರವ್ ಹೆಗ್ಡೆ ಮನವಿ ಸಲ್ಲಿಸಿದರು. ಬಿಜೆಪಿ ಆರ್ಥಿಕ ಪ್ರಕೋಷ್ಠದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಾರಾಮ ಶೆಟ್ಟಿ ವೇದಿಕೆಯಲ್ಲಿದ್ದರು. ಭಾರತೀಯ ಲೆಕ್ಕಪರಿಶೋಧಕರ ಸಂಘದ ಮಂಗಳೂರು ಶಾಖೆಯ ಅಧ್ಯಕ್ಷ ಭಾರ್ಗವ ಮಾತನಾಡಿದರು.
Click this button or press Ctrl+G to toggle between Kannada and English