ಮಂಗಳೂರು: ನಗರದಲ್ಲಿ ಕಾನೂನುಬಾಹಿರವಾಗಿ ಆನ್‌ಲೈನ್ ಟ್ಯಾಕ್ಸಿಗಳಾದ ಓಲಾ ಮತ್ತು ಉಬರ್ ಕಾರುಗಳು ಓಡಾಟ ನಡೆಸುತ್ತಿವೆ ಎಂದು ಆರೋಪಿಸಿ ರಿಕ್ಷಾ ಚಾಲಕರು ಇಂದು ಬೆಳಗ್ಗೆ ಪ್ರತಿಭಟನೆ ನಡೆಸಿದರು.ಮಂಗಳೂರು ನಗರ ಆಟೊ ಚಾಲಕ-ಮಾಲಕರ ಒಕ್ಕೂಟದ ನೇತೃತ್ವದಲ್ಲಿ ದ.ಕ.ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆ ನಡೆಯಿತು.
ಸಾರಿಗೆ ಪ್ರಾಧಿಕಾರ ನಿಗದಿಪಡಿಸಿರುವ ಮೀಟರ್ ದರವನ್ನೇ ಪ್ರಯಾಣಿಕರಿಂದ ಪಡೆಯಬೇಕು.ಸಾರಿಗೆ ವಾಹನಗಳು ಕಡ್ಡಾಯವಾಗಿ ಮೀಟರ್ ಅಳವಡಿಸಬೇಕೆಂಬ ನಿಯಮವಿದೆ. ನಗರದಲ್ಲಿ ಸೂಕ್ತ ಪರವಾನಿಗೆಯನ್ನು ಹೊಂದಿರಬೇಕೆಂಬ ನಿಯಮವಿದೆ. ಆದರೆ ವಿದೇಶಿ ಕಂಪೆನಿಗಳಾದ ಉಬರ್ ಮತ್ತು ಓಲಾ ಕಾರುಗಳು ಈ ನಿಯಮಗಳನ್ನು ಗಾಳಿಗೆ ತೂರಿ ಸಂಚರಿಸುತ್ತಿವೆ ಎಂದು ಪ್ರತಿಭಟನಾಕಾರರು ದೂರಿದರು. ಈ ಆನ್‌ಲೈನ್ ಟ್ಯಾಕ್ಸಿಗಳ ಓಡಾಟದಿಂದ ಬಡ ರಿಕ್ಷಾ ಚಾಲಕರು ಸಂಕಷ್ಟ ಎದುರಿಸುವಂತಾಗಿದೆ. ಕಡಿಮೆ ಬಾಡಿಗೆ ದರಲ್ಲಿ ಪ್ರಯಾಣಿಕರನ್ನು ಸಾಗಿಸುವುದಾಗಿ ಹೇಳುವ ಈ ಆನ್‌ಲೈನ್ ಟ್ಯಾಕ್ಸಿಗಳು ರಿಕ್ಷಾ ಚಾಲಕರ ಬದುಕಿಗೆ ಕೊಡಲಿಯೇಟು ನೀಡುತ್ತಿವೆ ಎಂದು ರಿಕ್ಷಾ ಚಾಲಕರು ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಓಲಾ ಮತ್ತು ಉಬರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರಿಕ್ಷಾ ಚಾಲಕರು ಒತ್ತಾಯಿಸಿದರು.
ಇದಕ್ಕೂ ಮೊದಲು ಮಂಗಳೂರು ಮಿನಿ ವಿಧಾನಸೌಧದಿಂದ ಆರ್.ಟಿ.ಎ. ಕಚೇರಿಯವರೆಗೆ ಹಾಗೂ ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಜಾಥಾ ನಡೆಸಿದರು.
Click this button or press Ctrl+G to toggle between Kannada and English