ಮಂಗಳೂರು: ಅಖಿಲ ಭಾರತ ಪೆಟ್ರೋಲಿಯಂ ವರ್ತಕರ ಸಂಘ ಯುನೈಟೆಡ್ ಪೆಟ್ರೋಲಿಯಂ ಫ್ರಂಟ್ ಕರೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಪೆಟ್ರೋಲಿಯಂ ವರ್ತಕರ ಸಂಘ `ಡಿಕೆಯುಪಿಡಿಎ’ ಸಂಪೂರ್ಣ ಬೆಂಬಲ ಪ್ರಕಟಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷ ಸತೀಶ್ ಎನ್.ಕಾಮತ್, ಅ. 12ರ ರಾತ್ರಿ 12ಗಂಟೆಯಿಂದ ಮರುದಿನ ಮಧ್ಯರಾತ್ರಿ 12 ಗಂಟೆಯವರೆಗೆ ಎರಡೂ ಜಿಲ್ಲೆಗಳ ಪೆಟ್ರೋಲ್ ಬಂಕ್‌ಗಳು ಮುಚ್ಚಿರುತ್ತವೆ. ಆ ದಿನ ಬಂಕ್‌ಗಳು ಇಂಧನ ಮಾರಾಟ ಮತ್ತು ಖರೀದಿ ಮಾಡದೆ ರಾಷ್ಟ್ರ ವ್ಯಾಪ್ತಿಯ ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ ಎಂದರು.
ಪೆಟ್ರೋಲಿಯಂ ಇಲಾಖೆ ಮುಷ್ಕರಕ್ಕೆ ಪೂರಕವಾಗಿ ಸ್ಪಂದಿಸದಿದ್ದರೆ ಅ. 27ರಿಂದ ಅನಿಷ್ಟಾವಧಿ ಮುಷ್ಕರ ನಡೆಸುವುದಾಗಿ ಎಚ್ಚರಿಸಿದ ಅವರು, 2016 ಏ. 11ರ ಜಂಟಿ ಒಪ್ಪಂದದ ಪ್ರಕಾರ ತೈಲ ಕಂಪೆನಿಗಳು ಒಪ್ಪಿಕೊಂಡ ಸವಲತ್ತುಗಳನ್ನು ಕೂಡಲೇ ಜಾರಿಗೊಳಿಸಬೇಕು. ಪೆಟ್ರೋಲಿಯಂ ಉತ್ಪನ್ನಗಳಾದ ಡೀಸೆಲ್ ಮತ್ತು ಪೆಟ್ರೋಲನ್ನು ಸರಕು ಮತ್ತು ಸೇವಾ ತೆರಿಗೆಯ ವ್ಯಾಪ್ತಿಗೆ ತಂದು `ಒಂದು ರಾಷ್ಟ್ರ ಒಂದು ತೈಲದರ’ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ದಿನನಿತ್ಯದ ದರ ಪರಿಷ್ಕರಣೆಯಲ್ಲಿ ಪಾರದರ್ಶಕತೆ ಇಲ್ಲ. ಯಾವ ಆಧಾರದಲ್ಲಿ ಬೆಲೆಗಳು ಏರಿಳಿತ ಆಗುತ್ತಿವೆ ಎಂಬುದು ಯಾರಿಗೂ ತಿಳಿಯುತ್ತಿಲ್ಲ. ಶೇ. 80ರಷ್ಟು ಪೆಟ್ರೋಲ್ ಬಂಕ್‌ಗಳಲ್ಲಿ ಸ್ವಯಂಚಾಲಿತ ದರ ನಿಗದಿ ವ್ಯವಸ್ಥೆ ಇಲ್ಲ. ಇದರಿಂದ ಗ್ರಾಹಕರು ಬಂಕ್ ಮಾಲೀಕರ ಮೇಲೆ ಸಂಶಯ ಪಡುವ ಪರಿಸ್ಥಿತಿ ಉದ್ಭವಿಸುತ್ತಿದೆ ಎಂದು ಕಾಮತ್ ನುಡಿದರು.
Click this button or press Ctrl+G to toggle between Kannada and English