ಅಲ್ಪಸಂಖ್ಯಾತರು ವಾಸಿಸುತ್ತಿರುವ ಪ್ರದೇಶಗಳಲ್ಲಿ ಯೋಜನೆ, ಅನುದಾನ ಮಂಜೂರು : ತನ್ವೀರ್ ಸೇಠ್

10:38 AM, Thursday, October 12th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

thanvir-setಮಂಗಳೂರು: ಅಲ್ಪಸಂಖ್ಯಾತರು ವಾಸಿಸುತ್ತಿರುವ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣಕ್ಕೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ವಿಶೇಷ ಯೋಜನೆಯೊಂದನ್ನು ರೂಪಿಸಲಾಗಿದ್ದು, ಮೊದಲ ಕಂತಿನಲ್ಲಿ ರೂ.400 ಕೋಟಿ ಅನುದಾನ ಮಂಜೂರಾಗಿದೆ. ಎರಡನೇ ಕಂತಿನಲ್ಲಿ ಇನ್ನೂ ರೂ.400 ಕೋಟಿ ಅನುದಾನ ಮಂಜೂರು ಮಾಡಲಾಗುವುದು ಎಂದು ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಮತ್ತು ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದರು. ಅವರು ತಾಲ್ಲೂಕಿನ ಗುರುವಾಯನಕೆರೆಯ ಹಝ್ರತ್ ಶೈಖ್ ಹಯಾತುಲ್ ಔಲಿಯಾ ದರ್ಗಾ ಮತ್ತು ಜುಮಾ ಮಸೀದಿಯಲ್ಲಿ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನದಿಂದ ನೂತನವಾಗಿ ನಿರ್ಮಿಸಲಾಗಿರುವ ಶಾದಿಮಹಲ್ ಸಭಾಭವನವನ್ನು ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತ ಸಮುದಾಯದ ಜನರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿ, ಕಾರ್ಯರೂಪಕ್ಕೆ ತಂದಿದೆ. ಮುಂದಿನ ವರ್ಷದಿಂದ ಇಲಾಖೆಯಿಂದ ಯಾವುದೇ ಯೋಜನೆಯ ಫಲಾನುಭಾವಿಗೆ ಕನಿಷ್ಠ ರೂ.50 ಸಾವಿರವಾದರೂ ದೊರಕುವಂತೆ ಮಾಡುವ ಗುರಿಯಿದೆ ಎಂದರು.

ರಾಜ್ಯದಲ್ಲಿ 38 ಸಾವಿರ ವಕ್ಫ್ ಆಸ್ತಿಗಳಿದ್ದು, ಅದರ ರಕ್ಷಣೆಗೆ ಹೆಚ್ಚು ಮಹತ್ವ ನೀಡಿದೆ. ಅದಕ್ಕಾಗಿ ಕಳೆದ ವರ್ಷ ರೂ.85 ಕೋಟಿ ಅನುದಾನ ಖರ್ಚು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಅನುದಾನ ಒದಗಿಸಲಾಗುವುದು. ಶಾದಿ ಮಹಲ್ ಕಟ್ಟಡಗಳ ಕಾಮಗಾರಿಗಳು ಅರ್ಧಕ್ಕೆ ನಿಲ್ಲದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಅದರ ದುರುಪಯೋಗ ತಡೆಯಲು ಕಾನೂನಿನಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡಲಾಗಿದೆ ಎಂದ ಅವರು, ರಾಜ್ಯದಲ್ಲಿ 286 ಶಾದಿಮಹಲ್ ಸಭಾಭವನಗಳಿಗಾಗಿ ರೂ.113 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಧ ರೈ ಮಾತನಾಡಿ, ರಾಜ್ಯ ಸರ್ಕಾರ ಎಲ್ಲ ಜಾತಿ, ಧರ್ಮ, ಭಾಷೆಯ ಜನರನ್ನೂ ಯಾವುದೇ ಭೇದ ಭಾವವಿಲ್ಲದೆ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ರಾಜ್ಯವನ್ನು ಕಟ್ಟಲು ಪ್ರಯತ್ನಿಸುತ್ತಿದೆ. ಕಾನೂನಿನ ಕೆಲವು ತೊಡಕುಗಳಿಂದಾಗಿ ಶಾದಿಮಹಲ್ ಹಾಗೂ ಇತರ ಕೆಲವು ಯೋಜನೆಗಳ ಕಡತಗಳು ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಳಂಬವಾಗುತ್ತಿದೆ. ಇದು ಜನರ ಸಹಭಾಗಿತ್ವದಲ್ಲಿ ನಡೆಯುವ ಯೋಜನೆಗಳಾಗಿದ್ದು, ಇದರ ಮಾರ್ಗಸೂಚಿಗಳನ್ನು ಸರಳೀಕರಣಗೊಳಿಸುವಂತೆ ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ವಸಂತ ಬಂಗೇರ ಮಾತನಾಡಿ, ತಾಲ್ಲೂಕಿನಲ್ಲಿ ಈ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಬಹುತೇಕ ಬೇಡಿಕೆಗಳನ್ನು ಈಡೇರಿಸಲಾಗಿದೆ. ಇನ್ನಷ್ಟು ಅನುದಾನದ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದು, ಈಡೇರಿಕೆಯಾಗುವ ಭರವಸೆಯಿದೆ ಎಂದರು. ಜಿಲ್ಲಾ ಪಂಚಾಯಿತಿ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷ ಕೆ.ಕೆ ಶಾಹುಲ್ ಹಮೀದ್, ಭಾರತ ಸೇವಾದಳದ ಅಲ್ಪೋನ್ಸ್ ಫ್ರಾಂಕೋ ಮಾತನಾಡಿದರು. ಗುರುವಾಯನಕೆರೆ ಖತೀಬರಾದ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ದುವಾ ನೆರವೇರಿಸಿದರು.

ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮುಗುಳಿ ನಾರಾಯಣರಾವ್, ಜಿಲ್ಲಾ ಪಂಚಾಯಿತಿ ಸದಸ್ಯ ಧರಣೇಂದ್ರಕುಮಾರ್, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಎ.ಉಸ್ಮಾನ್, ಕಿರಿಯ ಎಂಜಿನಿಯರ್ ತೌಸೀಫ್, ಉಸ್ಮಾನ್ ಶಾಫಿ, ಉಸ್ಮಾನ್ ಬಳೆಂಜ, ಮಹಮ್ಮದ್ ರಾಫಿ, ಯಾಕೂಬ್ ಮುಸ್ಲಿಯಾರ್, ಅಬೂಬಕ್ಕರ್, ಮುದರಿಸ್ಸರಾದ ಸುಲೈಮಾನ್, ಮಹಮ್ಮದ್ ಶರೀಫ್, ಶ್ರೀಧರ ಭಂಡಾರಿ ಉಪಸ್ಥಿತರಿದ್ದರು. ಹಸೈನಾರ್ ಶಾಫಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು, ಅಶ್ರಫ್ ಆಲಿಕುಂಜ್ಞಿ ನಿರೂಪಿಸಿದರು, ಉಸ್ಮಾನ್ ಬಳೆಂಜ ವಂದಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English