ಮಂಗಳೂರು: “ಸ್ತ್ರೀಯರು ಪುರುಷರಿಗೆ, ಪುರುಷರು ಸ್ತ್ರೀಯರಿಗೆ ಮಸಾಜ್ ಮಾಡಬಾರದು ಎಂದು ಯಾವ ಕಾನೂನು ಹೇಳುತ್ತದೆ? ಒಂದು ವೇಳೆ ಅನೈತಿಕ ಚಟುವಟಿಕೆ ನಡೆಯುತ್ತಿದ್ದರೆ ಅಥವಾ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೆ ಕಾನೂನು ಪ್ರಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬಹುದಲ್ಲವೇ? ಎಂದು ಹೈಕೋರ್ಟ್ ಪಾಲಿಕೆಯನ್ನು ಪ್ರಶ್ನಿಸಿದೆ. ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳು ಲಭ್ಯವಾಗದಿದ್ದರೂ ಮಸಾಜ್ ಸೆಂಟರ್ ಗಳ ಪರವಾನಿಗೆ ಹೇಗೆ ರದ್ದು ಪಡಿಸಿದ್ದೀರಿ?” ಎಂದು ಮಂಗಳೂರು ಮಹಾನಗರ ಪಾಲಿಕೆ (ಮನಪಾ)ಯ ಆಡಳಿತವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಮಂಗಳೂರು ಮೇಯರ್ ಕವಿತಾ ಸನಿಲ್ ನೇತೃತ್ವದಲ್ಲಿ ಈ ಹಿಂದೆ ನಗರದಲ್ಲಿ ಮಸಾಜ್ ಪಾರ್ಲರ್ ಗಳ ಮೇಲೆ ದಾಳಿ ನಡೆಸಿ ಆರು ಮಸಾಜ್ ಸೆಂಟರ್ ಗಳ ಪರವಾನಿಗೆ ರದ್ದುಪಡಿಸಲಾಗಿತ್ತು. ಆಯುರ್ವೇದ, ಪಂಚಕರ್ಮ ಚಿಕಿತ್ಸೆ ನೀಡುವ ನೆಪದಲ್ಲಿ ನಡೆಯುತ್ತಿದ್ದ ಆರು ಮಸಾಜ್ ಸೆಂಟರ್ ಗಳ ಪರವಾನಿಗೆ ರದ್ದು ಪಡಿಸಿದ್ದನ್ನು ಮಾಲಿಕರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಇದರ ವಿಚಾರಣೆಯನ್ನು ಹೈಕೋರ್ಟ್ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲರು, ‘ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬ ದೂರುಗಳು ಕೇಳಿ ಬಂದ ಮಾತ್ರಕ್ಕೆ ಯಾವುದೇ ಶೋಕಾಸ್ ನೋಟಿಸ್ ಜಾರಿ ಮಾಡದೆ, ಸ್ಥಳ ಪರಿಶೀಲನೆ ನಡೆಸದೆ ಏಕಾಏಕಿ ಪರವಾನಿಗೆ ರದ್ದು ಪಡಿಸಿದ ಮಂಗಳೂರು ಮಹಾನಗರ ಪಾಲಿಕೆ ಅಕ್ರಮ ಮತ್ತು ಕಾನೂನು ಬಾಹಿರ,’ ಎಂದು ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು ಮನಪಾ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡು ಅಂತಿಮವಾಗಿ, ‘ಅರ್ಜಿದಾರರಿಗೆ ಹೊಸದಾಗಿ ಶೋಕಾಸ್ ನೋಟಿಸ್ ಜಾರಿಗೊಳಿಸಿ ಅವರ ಆಹವಾಲುಗಳನ್ನು ಆಲಿಸಬೇಕು. ಅಗತ್ಯ ಬಿದ್ದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅಲ್ಲಿಯವರೆಗೆ ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗಬಾರದು,’ ಎಂದು ಪಾಲಿಕೆಗೆ ಎಚ್ಚರಿಕೆ ನೀಡಿದೆ.
Click this button or press Ctrl+G to toggle between Kannada and English