ಉಡುಪಿ: ಮುಂದಿನ ಅ.14ರೊಳಗೆ ಉಡುಪಿ ಜಿಲ್ಲೆಯ 100 ದಲಿತ ಕುಟುಂಬಗಳಿಗೆ ಬೌದ್ಧ ಧಮ್ಮ ದೀಕ್ಷೆ ನೀಡುವ ಸಂಕಲ್ಪ ಹೊಂದಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ(ಪ್ರೊ.ಕೃಷ್ಣಪ್ಪ ಸ್ಥಾಪಿತ) ಉಡುಪಿ ಜಿಲ್ಲಾ ಸಮಿತಿಯ ಸಂಚಾಲಕ, ದಲಿತ ಚಿಂತಕ ನಾರಾಯಣ ಮಣೂರು ತಿಳಿಸಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ(ಪ್ರೊ.ಕೃಷ್ಣಪ್ಪ ಸ್ಥಾಪಿತ) ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಐತಿಹಾಸಿಕ ಧಮ್ಮ ದೀಕ್ಷಾ ದಿನದ ಅಂಗವಾಗಿ ಶನಿವಾರ ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾದ ‘ಬೌದ್ಧ ದಮ್ಮದೆಡೆಗೆ ನಮ್ಮ ನಡಿಗೆ’ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಇಂದು ದಲಿತರಿಗೆ ಅಂಬೇಡ್ಕರ್ ಸ್ವೀಕಾರ ಮಾಡಿದ ಧರ್ಮದ ಬಗ್ಗೆ ಅರಿವು ಇಲ್ಲ. ಆ ಕೆಲಸಕ್ಕೆ ಇಂದಿನ ಚಾಲನೆ ನೀಡಲಾಗಿದ್ದು, ಅದರಂತೆ ಜಿಲ್ಲೆಯ ಬಹುತೇಕ ಹಳ್ಳಿಗಳಿಗೆ ಭೇಟಿ ನೀಡಿ ಜನರನ್ನು ಜಾಗೃತಗೊಳಿಸಿ ಕನಿಷ್ಠ 100 ಕುಟುಂಬಗಳನ್ನು ವರ್ಷದೊಳಗೆ ಬೌದ್ಧ ಧರ್ಮಕ್ಕೆ ಇದೇ ವೇದಿಕೆಯಲ್ಲಿ ಸೇರಿಸಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಮಠಗಳು, ಸ್ವಾಮೀಜಿಗಳು ಅಸ್ಪಶ್ಯತೆ ನಿರ್ಮೂಲನೆಗೆ ಯಾವುದೇ ಕೆಲಸ ಮಾಡಿಲ್ಲ. ಆದರೆ ಅಸ್ಪಶ್ಯರು ಬೌದ್ಧ ಧರ್ಮಕ್ಕೆ ಹೋದರೆ ಬೊಬ್ಬೆ ಹೊಡೆಯುತ್ತಾರೆ. ಮಠದಲ್ಲಿ ಕುಳಿತು ಉಪದೇಶ ಮಾಡುವ ಸ್ವಾಮೀಜಿಗಳಿಗೆ ಗುಂಡಿಯಲ್ಲಿ ಬಿದ್ದು ಸಾಯುವ ಪೌರ ಕಾರ್ಮಿಕರು ಕಾಣುತ್ತಿಲ್ಲವೇ, ಅವರ ಸಾವಿನ ಬಗ್ಗೆ ಇವರು ಆಲೋಚನೆ ಮಾಡಿದ್ದಾರೆಯೇ ಎಂದವರು ಪ್ರಶ್ನಿಸಿದರು. ಕೇವಲ ಹೆಸರಿಗೆ ಮಾತ್ರ ಬೌದ್ಧ ಧರ್ಮಕ್ಕೆ ಸ್ವೀಕರಿಸಿದರೆ ಸಾಲದು. ಈಗ ಆಚರಿಸುತ್ತಿರುವ ಎಲ್ಲ ವೈದಿಕ ಆಚರಣೆಗಳನ್ನು ಕೈಬಿಡಬೇಕು ಎಂದ ಅವರು, ನಮ್ಮ ಬದ್ಧತೆಯನ್ನು ತೋರಿಸುವುದು ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಮಾಡುವುದರ ಮೂಲಕ ಅಲ್ಲ. ಬದಲು ಅವರ ತತ್ವ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಅವರ ದಾರಿಯಲ್ಲಿ ನಡೆಯುವ ಮೂಲಕ ತೋರಿಸ ಬೇಕು ಎಂದರು.
ಬೌದ್ಧ ಧರ್ಮಕ್ಕೆ ಮತಾಂತರಗೊಂಡರೆ ಮೀಸಲಾತಿ ಹೋಗುತ್ತದೆ ಎಂಬ ಆತಂಕ ಪಡುವ ಅಗತ್ಯವಿಲ್ಲ. ಯಾಕೆಂದರೆ ಬೌದ್ಧ ಧರ್ಮ ಈ ನೆಲದ ಧರ್ಮ, ಅಸ್ಪಶ್ಯರ ಧರ್ಮ ಹಾಗೂ ಈ ದೇಶವನ್ನು ಆಳಿದ ನಾಗ ವಂಶದವರ ಧರ್ಮ. ಹಾಗಾಗಿ ನಾವು ಬೌದ್ಧ ಧರ್ಮಕ್ಕೆ ಮತಾಂತರಗೊಂಡರೂ ನಮಗೆ ಸಾಂವಿಧಾನಿಕ ಬೆಂಬಲ ಇರುವುದರಿಂದ ಮೀಸಲಾತಿ ಮುಂದುವರಿಯುತ್ತದೆ. ಯಾವುದೇ ಸೌಲಭ್ಯ, ಸರಕಾರಿ ಉದ್ಯೋಗ ಪಡೆಯಲು ನಮಗೆ ತೊಂದರೆ ಆಗುವುದಿಲ್ಲ. ಈ ಸಂವಿಧಾನಿಕ ಬೆಂಬಲ ಇರುವುದು ಕೇವಲ ಬೌದ್ಧ ಧರ್ಮಕ್ಕೆ ಮಾತ್ರ ಎಂದು ನಾರಾಯಣ ಮಣೂರು ಹೇಳಿದರು.
ವೇದಿಕೆಯಲ್ಲಿ, ದಸಂಸ(ಅಂಬೇಡ್ಕರ್ ವಾದ) ಮುಖಂಡ ಸುಂದರ್ ಮಾಸ್ಟರ್, ವಿವಿಧ ದಸಂಸ ಸಂಘಟನೆಯ ಮುಖಂಡರಾದ ಶ್ಯಾಮ್ ರಾಜ್ ಬಿರ್ತಿ, ಉದಯ ಕುಮಾರ್ ತಲ್ಲೂರು, ಶ್ಯಾಮ್ ತೆಕ್ಕಟ್ಟೆ, ಶೇಖರ್ ಹೆಜಮಾಡಿ, ಮಹಿಳಾ ಘಟಕದ ಜಿಲ್ಲಾ ಸಂಚಾಲಕಿ ವಿಜಯಲಕ್ಷ್ಮಿ ಉಪಸ್ಥಿತರಿದ್ದರು. ಉಮಾನಾಥ ಪಡುಬಿದ್ರೆ ಸ್ವಾಗತಿಸಿದರು. ಶಂಕರ್‌ದಾಸ್ ಚೇಂಡ್ಕಳ ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English